ಬೆಂಗಳೂರು: ಬೆಂಗಳೂರು ನಗರದಲ್ಲಿ “ಕಸ ಸುರಿಯುವ ಹಬ್ಬ” ದ ಮೂಲಕ 218 ಮನೆಗಳ ಮುಂದೆ ಕಸ ಸುರಿದು 2.80 ಲಕ್ಷ ರೂ. ಗಳ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ರವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಪ್ರತಿ ಮನೆಗೆ ಬೆಳಿಗ್ಗೆ ಆಟೋ ಟಿಪ್ಪರ್ ಗಳಲ್ಲಿ ಹೋಗಿ ಕಸವನ್ನು ಸಂಗ್ರಹಿಸಲಾಗುತ್ತಿದೆ. ಆದರೂ ಕೆಲ ಸಾರ್ವಜನಿಕರು ಕಸವನ್ನು ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಖಾಲಿ ಜಾಗಗಳಲ್ಲಿ ಎಸೆಯುತ್ತಿದ್ದಾರೆ.
ರಸ್ತೆ ಬದಿ ಕಸ ಸುರಿಯುವುದರಿಂದ ನಗರ ನೈರ್ಮಲ್ಯ ಹಾಳಾಗುತ್ತಿದೆ. ಇಂತಹ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಿಂದ ರಸ್ತೆ ಬದಿ ಕಸ ಬಿಸಾಡುವವರನ್ನು ಗುರುತಿಸಿ ಅವರ ಮನೆ ಮುಂದೆ ಕಸ ಬಿಸಾಡುವಂತಹ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆಟೋ ಟಿಪ್ಪರ್ ಗಳಿಗೆ ಕಸ ಕೊಡದೆ ರಾತ್ರಿ ವೇಳೆ ರಸ್ತೆ ಬದಿ ಹಾಗೂ ಇನ್ನಿತರೆ ಕಡೆ ಕಸ ಎಸೆಯುತ್ತಾರೆ. ಬೇರೆಯವರ ಮನೆ ಮುಂದೆ/ರಸ್ತೆಗಳಲ್ಲಿ ಕಸ ಬಿದ್ದಾಗ ಹೇಗೆ ಅನ್ನಿಸುತ್ತದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಅವರ ಮನೆ ಮುಂದೆಯೇ ಕಸ ಸುರಿಯಲಾಗಿದೆ.
ಅದರಂತೆ, ರಸ್ತೆಗೆ ಕಸ ಎಸೆದಿರುವಂತಹ 218 ಮನೆಗಳ ಮುಂದೆ ಇಂದು ಕಸ ಸುರಿದು, ರೂ. 2,80,000 ಗಳ ಮೊತ್ತದ ದಂಡವನ್ನು ವಸೂಲಿ ಮಾಡಲಾಗಿದೆ. ತದನಂತರ ಕಸವನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ನಗರದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಲು ದಯವಿಟ್ಟು ಸಹಕರಿಸಿ, ಆಟೋ ಟಿಪ್ಪರ್ ಬಂದಾಗ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸವನ್ನು ನೀಡುವಂತೆ ಅವರು ತಿಳಿಸಿದ್ದಾರೆ.
ರಸ್ತೆ ಬದಿ ಕಸ ಎಸೆಯದಂತೆ ಜಾಗೃತಿ:
ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ನಿಲ್ಲಿಸಬೇಕಾಗಿದ್ದು, ನಗರ ಪಾಲಿಕೆ ವತಿಯಿಂದ ಮನೆ ಮನೆಗೆ ಬರುವ ಆಟೋ ಟಿಪ್ಪರ್ ಗಳಿಗೆ ಕಸವನ್ನು ಒಣ ಕಸ ಮತ್ತು ಹಸಿ ಕಸವನ್ನಾಗಿ ಬೇರ್ಪಡಿಸಿ ನೀಡುವ ಕುರಿತಾಗಿ ಹಾಗೂ ನಿಗದಿತ ಸಮಯದಲ್ಲಿ ಕಸವನ್ನು ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ನಗರ ವ್ಯಾಪ್ತಿಯಲ್ಲಿ 65 ಕಸ ಕಿಯೋಸ್ಕ್ ಸ್ಥಾಪನೆ:
ನಗರದಲ್ಲಿ ರಸ್ತೆ ಬದಿ ಕಸ ಬಿಸಾಡುವುದನ್ನು ನಿಯಂತ್ರಿಸುವ ಸಲುವಾಗಿ ನಗರದಾದ್ಯಂತ ಸುಮಾರು 65 ಕಸ ಕಿಯೋಸ್ಕ್ ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದ್ದು, ಈಗಾಗಲೇ ಬಿಟಿಎಂ ವ್ಯಾಪ್ತಿಯಲ್ಲಿ ಕಸ ಕಿಯೋಸ್ಕ್ ತೆರೆದಿದ್ದು, ನಾಗರಿಕರಿಂದ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕಸ ಕಿಯೋಸ್ಕ್ ನಿಂದ ಸ್ಥಳಿಯವಾಗಿ ಬ್ಲಾಕ್ ಸ್ಪಾಟ್ ಗಳ ನಿರ್ಮೂಲನೆ, ತ್ಯಾಜ್ಯ ದುರ್ವಾಸನೆ ಸೇರಿದಂತೆ ಇತರ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಪ್ರತಿ ಕಸ ಕಿಯೋಸ್ಕ್ ನಲ್ಲಿ 100 ಲೀಟರ್ ಸಾಮರ್ಥ್ಯದ ನಾಲ್ಕು ಸಂಗ್ರಹಣಾ ಬಿನ್ ಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಬೇರ್ಪಡಿಸಿದ ಕಸವನ್ನು ಯಾವುದೇ ಶುಲ್ಕವಿಲ್ಲದೆ ಈ ಕಿಯೋಸ್ಕ್ ಗಳಿಗೆ ಉಚಿತವಾಗಿ ನೀಡಬಹುದಾಗಿದೆ.
9448197197 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ:
ನಗರದ ಸ್ವಚ್ಛತೆಯ ದೃಷ್ಟಿಯಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು ದೂರು ಕೇಂದ್ರ ಸ್ಥಾಪಿಸಿದ್ದು, ಅದಕ್ಕಾಗಿ ಪ್ರತ್ಯೇಕ ವ್ಯಾಟ್ಸಪ್ ಸಂಖ್ಯೆಯನ್ನು 9448197197 ನೀಡಿದೆ. ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ ಅಥವಾ ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ.
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಬೇಕಾದ ‘ಅಗತ್ಯ ದಾಖಲೆ’ಗಳಿವು
‘ಬೆಂಗಳೂರು ಗ್ರಾಮಾಂತರ ಸರ್ಕಾರಿ ನೌಕರರ ಸಂಘ’ದ ಜಿಲ್ಲಾಧ್ಯಕ್ಷರಾಗಿ ‘ಕೆ.ಹನುಮಂತರಾಯಪ್ಪ’ ಆಯ್ಕೆ
 
		



 




