ಶಿವಮೊಗ್ಗ: ರಾಜ್ಯ ಸರ್ಕಾರದ ಆಡಳಿತವು ಎಷ್ಟು ಪ್ರಭಾವದ ದುರುಪಯೋಗದಲ್ಲಿ ಮುಳುಗಿದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣವೇ ಸಾಕ್ಷಿಯಾಗಿದೆ. ತೆಲಂಗಾಣದ ವ್ಯಾಪಾರಿಗಳು ಕರ್ನಾಟಕದ ರೈತರಿಂದ 1.89 ಕೋಟಿ ರೂ. ಮೌಲ್ಯದ ಜೋಳವನ್ನು ಖರೀದಿ ಮಾಡಿ ಹಣ ಪಾವತಿಸದೇ ಮೋಸಮಾಡಿದ ಪ್ರಕರಣದಲ್ಲಿ, ಆರೋಪಿತರಾದ ಅಕ್ಬರ್ ಪಾಷಾ ಅವರನ್ನು ರಕ್ಷಿಸಲು ರಾಜ್ಯದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರು ನೇರವಾಗಿ ಠಾಣೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ ಎಂಬ ಗಂಭೀರ ಮಾಹಿತಿ ಸಾಕ್ಷಿಯೊಡನೆ ಹೊರಬಂದಿದೆ. ಇದು ರೈತರ ಪರ ನಿಲ್ಲಬೇಕಾದ ಸಚಿವರ ನೈತಿಕ ಪತನವನ್ನು ತೋರಿಸುತ್ತದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದುಃಖಕರ ಸಂಗತಿ ಎಂದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ರವರು ರೈತರ ಪರ ಒಂದು ಶಬ್ದವನ್ನೂ ಮಾತಾಡುವ ಪ್ರಯತ್ನವೂ ಕೂಡ ಮಾಡಿಲ್ಲ. ಜನರ ಗಮನ ಸೆಳೆಯಲು,ವೈಯಕ್ತಿಕ ಪ್ರಚಾರಕ್ಕಾಗಿ ವಿರೋಧ ಪಕ್ಷದವರ ಮೇಲೆ ದಾಳಿ ಮಾಡಲು ಮುಂದಾಳತ್ವ ವಹಿಸಲು ಮಹತ್ವ ನೀಡುವ ಅವರು ರೈತರ ನೋವಿನ ವಿಷಯದಲ್ಲಿ ಮೌನ ವಹಿಸಿರುವುದು ನೈತಿಕ ಹೀನತೆ ಎಂದು ಗುಡುಗಿದ್ದಾರೆ.
ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್ (RGHCL) ಇಲಾಖೆಯೊಳಗೇ ಭ್ರಷ್ಟಾಚಾರದ ಬಿರುಕು ಬಿಟ್ಟಿದ್ದು, ಕಾಂಗ್ರೆಸ್‌ನ ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್ ಅವರು ಇತ್ತೀಚಿಗಷ್ಟೇ ವೈರಲ್ ಮಾಡಿದ್ದ ಆಡಿಯೋ ಕ್ಲಿಪ್‌ನಲ್ಲಿ ಲಂಚದ ಆರೋಪಗಳು ಸ್ಪಷ್ಟವಾಗಿ ಕೇಳಿಬಂದಿವೆ. ಈ ಘಟನೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇಲಾಖೆಯ ನೈತಿಕ ಕುಸಿತವನ್ನು ತೋರಿಸುತ್ತದೆ. ತಮ್ಮ ಇಲಾಖೆಯೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಅವರು ಸಂಪೂರ್ಣ ವಿಫಲರಾಗಿದ್ದು, ಇದೀಗ ಅವರೇ ಈ ದುರ್ವ್ಯವಹಾರದ ಭಾಗಿಯಾಗಿರುವ ಶಂಕೆ ಗಟ್ಟಿಯಾಗುತ್ತಿದೆ ಹೇಳಿದ್ದಾರೆ.
ರಾಜ್ಯದಲ್ಲಿ ಕ್ಯಾಬಿನೆಟ್ ಪುನರ್ ರಚನೆಯ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಮುಖ್ಯಮಂತ್ರಿಗಳು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ “ಆಪ್ತ ಮಂತ್ರೀಯಾದ” ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ, ಪ್ರಭಾವದ ದುರುಪಯೋಗ ಮತ್ತು ರೈತರ ಅನ್ಯಾಯ ಮುಚ್ಚಿಹಾಕುವವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಹಕ್ಕಿಲ್ಲ ಎಂದು ಹೇಳಲು ಬಯಸುತ್ತೇನೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಹೇಳಿದ್ದಾರೆ.
BREAKING: ದೆಹಲಿ ಏರ್ ಪೋರ್ಟ್ ನಲ್ಲಿ ಬಸ್ಸಿಗೆ ಬೆಂಕಿ: ವಿಮಾನದ ಪಕ್ಕದಲ್ಲೇ ಹೊತ್ತಿ ಉರಿದ ಬಸ್








