ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆ ಪರಿಸರಕ್ಕೆ ಮಾರಕ, ನಿರ್ಮಿಸದಂತೆ ವಿರೋಧವನ್ನು ರೈತ ಸಂಘಟನೆಗಳು ವ್ಯಕ್ತ ಪಡಿಸಿದ್ದವು. ಈ ಬೆನ್ನಲ್ಲೇ ಕೆಪಿಸಿಎಲ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕೆಪಿಸಿಎಲ್ ಅಧಿಕಾರಿಗಳು, ಕರ್ನಾಟಕ ರಾಜ್ಯವು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮೂಲಕ ಶರಾವತಿ ಕಣಿವೆಯಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ಈ ಯೋಜನೆಯನ್ನು ಜಾರಿಗೊಳಿಸಲು ಕೆಪಿಸಿಎಲ್ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೆಜ್ಜೆ ಇಡುತ್ತಿದೆ. ಪ್ರಸ್ತುತ ಪರಿಸರ ಸಂರಕ್ಷಣೆ ಜೊತೆಗೆ ಬೇಡಿಕೆಗೆ ಅನುಗುಣವಾಗಿ ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಈ ಯೋಜನೆ ಅನಿವಾರ್ಯ ಎಂದರು.

ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ಅವಶ್ಯಕತೆ ಇಲ್ಲ. 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅತೀ ಕಡಿಮೆ ಭೂಮಿ ಬಳಕೆ ಮಾಡಿಕೊಳ್ಳುತ್ತಿರುವುದು ಶರಾವತಿ ಪಿಎಸ್‌ಪಿ ಯೋಜನೆಯ ಮಹತ್ವದ ಅಂಶವಾಗಿದೆ. ಈ ಯೋಜನೆಯಡಿ ಕೇವಲ 100,645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ)ವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯತರ ಪ್ರದೇಶವಾಗಿದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶ ಬಳಕೆ ವೇಳೆ ಕೈಗೊಳ್ಳಲಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ ಮತ್ತು ಈ ಬಗ್ಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಗಳೂ ಸಹ ಸೂಕ್ತ ಸಮಯದಲ್ಲಿ ಮೇಲುಸ್ತುವಾರಿ, ಪರಿಶೀಲನೆ, ಪರಾಮರ್ಶೆ ನಡೆಸಲಿವೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿ ಪರ್ಯಾಯ ಅರಣ್ಯ ಪುನರ್ ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಅರಣ್ಯತರ ಪ್ರದೇಶ ಹಾಗೂ ಅರಣ್ಯ ಪುನರ್ ಸ್ಥಾಪನೆಗೆ ತಗಲುವ ವೆಚ್ಚವನ್ನೂ ಭರಿಸುತ್ತಿದೆ. ಯೋಜನೆ ವ್ಯಾಪ್ತಿಯಲ್ಲಿ ಮರಗಳನ್ನು ಗುರುತಿಸಲಾಗಿದೆಯಾದರೂ ಅಗತ್ಯ ಇದ್ದರೆ ಮಾತ್ರ ಕಡಿಯಲಾಗುತ್ತದೆ ಎಂದರು.

ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮನಲ್ಲಿ ಕನಿಷ್ಟ ಪರಿಣಾಮ ಉಂಟಾಗುತ್ತದೆ. ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮನಲ್ಲಿ ಇರುವ ಮರ-ಗಿಡ- ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಕಾಮಗಾರಿ ವೇಳೆ ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ ಎಂಬುದಾಗಿ ಹೇಳಿದರು.
ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ-ಮರಗಳ ಕಡಿದು ಯೋಜನೆ ಜಾರಿ ಮಾಡಲು ಕ್ರಮವಹಿಸಿವೆ ಎಂಬುದಾಗಿ ಸ್ಪಷ್ಟ ಪಡಿಸಿದರು.

ಪಂಪ್ ಸ್ಟೋರೇಜ್ ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದ. ಈ ಪ್ರಾಧಿಕಾರವು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು. ಆ ನಿರ್ದೇಶನಾಲಯಗಳು ಯೋಜನೆಯಿಂದ ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವವಾಗುವುದಿಲ್ಲ, ಜೀವ ವೈವಿದ್ಯತೆಗೆ ಸಮಸ್ಯೆಯಾಗುವುದಿಲ್ಲ, ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಂಡು ವರದಿ ನೀಡಿದ ಬಳಿಕವೇ ಯೋಜನೆಗೆ ಅನುಮತಿ ನೀಡಲಾಗಿರುತ್ತದೆ ಎಂದರು.
ಈಗಾಗಲೇ ವನ್ಯ ಜೀವಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದಲ್ಲದೆ, ರಚನಾತ್ಮಕವಾಗಿ ಭೂಮಿಯ ಸ್ಥಿರತೆಗೆ ಯಾವುದೇ ಧಕ್ಕೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ವನ್ಯಜೀವಿ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕ ಯೋಜನೆಯನ್ನು ಮೇಲ್ಮಟ್ಟದಲ್ಲಿರುವ ವನ್ಯಜೀವಿ ಮಂಡಳಿ ಮುಂದೆ ಮಂಡಿಸಲಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ರಾಜ್ಯ ಮನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ ಎಂದು ಹೇಳಿದರು.
ಈ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ, ಪರಿಸರ ಇಲಾಖೆಗಳು ನಿಗದಿಪಡಿಸುವ ಮಾನದಂಡದಡಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕೇಂದ್ರ ಅರಣ್ಯ ಸಚಿವಾಲಯದ ನಿಯಮಗಳು ಮತ್ತು ಉಲ್ಲೇಖಗಳನ್ವಯ ಅಧ್ಯಯನ ನಡೆಸಲಾಗಿದೆ. ಈ ವರದಿ ಆಧರಿಸಿ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯ ನಿಯಮಗಳಂತೆ ಯೋಜನೆ ಅನುಷ್ಠಾನದ ವೇಳೆ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಶರಾವತಿ ಪಿಎಸ್ಪಿ ಯೋಜನೆ ಜಾರಿ ಪ್ರದೇಶದಲ್ಲಿ ಅಪರೂಪದ ಸಿಂಗಳೀಕಗಳು ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಇವರುಗಳ ಸಂಚಾರಕ್ಕೆ ಸಹ ತೊಡಕಾಗದಂತೆ ಕ್ರಮ ವಹಿಸಲು ಕೆಪಿಸಿ ಮುಂದಾಗಿದೆ. ಯೋಜನೆ ಜಾರಿ ವೇಳೆ ಅರಣ್ಯ ಇಲಾಖೆ ನೇತೃತ್ವದಲ್ಲಿ ಸಿಂಗಳೀಕಗಳ ಸಂಚಾರಕ್ಕೆ ಯಾವುದೇ ಬಾದಕ ಆಗಂದಂತೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿದ್ದ ಮೇಲ್ಸೇತುವೆ (ಟ್ರೀ ಕ್ಯಾನೋಪಿ)ಗಳನ್ನು ಅರಣ್ಯ ಇಲಾಖೆ, ಸೂಚನೆ, ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ನಿರ್ಮಾಣ ಮಾಡುವ ಷರತ್ತಿನೊಂದಿಗೆ ಕೆಪಿಸಿ ಯೋಜನೆ ಜಾರಿಗೆ ಮುಂದಾಗಿದೆ ಎಂದು ತಿಳಿಸಿದೆ.
ಕನಿಷ್ಠ ನೀರಿನ ಅಗತ್ಯ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ನೀರಿನ್ನು ಮರುಬಳಕೆ ಮಾಡುವುದರಿಂದ ಮತ್ತು ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲು ಅಥವಾ ಅಣೆಕಟ್ಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಿಸಲು ಅವಕಾಶವೇ ಇಲ್ಲದಿರುವುದರಿಂದ ನದಿಯಲ್ಲಿ ಎಂದಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ಸೇರಲಿದೆ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನೀರಿನ ಕೊರತೆ, ನದಿಗೆ ಉಪ್ಪು ನೀರು ಸೇರುವುದು ಅಥವಾ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 180ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಪಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ ಎಂದು ತಿಳಿಸಿದೆ.
ವಿದ್ಯುತ್ ಸರಬರಾಜಿಗೆ ಈಗಿರುವ ವ್ಯವಸ್ಥೆಯ ಬಳಕೆ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಉತ್ಪಾದಿಸಲಾಗುವ 2000 ಮೆಗಾ ವ್ಯಾಟ್ ವಿದ್ಯುತ್ ಅನ್ನು ಸರಬರಾಜು ಮಾಡಲು ಪ್ರಸ್ತುತ “ಓನ್ ನೇಷನ್- ಓನ್ ಗ್ರಿಡ್”ನಡಿ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನೇ ಬಳಸಲಾಗುವುದು. ಪ್ರಸ್ತುತ ಈ ವ್ಯಾಪ್ತಿಯಲ್ಲಿ ಲಭ್ಯವಿರುವ 220 ಕೆ.ವಿ ಸರಬರಾಜು ವ್ಯವಸ್ಥೆಯನ್ನು 400 ಕೆ.ವಿ ಮೇಲ್ದರ್ಜೆಗೆ ಏರಿಸಲಾಗುವುದರಿಂದ ಹೊಸದಾಗಿ ಲೈನ್ ಎಳೆಯಲು ಹೆಚ್ಚುವರಿ ಭೂಮಿಯ ಅವಶ್ಯಕತೆ ಇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಗುಡ್ಡ ಕುಸಿತ ಇಲ್ಲ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯೂ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಆಗುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರವೇ ಯೋಜನೆಗೆ ಅನುಮತಿ ನೀಡಿರುತ್ತದೆ ಎಂದು ತಿಳಿಸಿದೆ.
ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು? ಏಕೆ ಅನಿವಾರ್ಯ?
ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಇದನ್ನು ಎರಡು ಜಲಾಶಯಗಳ ಮಧ್ಯೆ ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಇದಕ್ಕಾಗಿ ಹೊಸ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹೆಚ್ಚು ಬೇಡಿಕೆ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುವುದರಿಂದ ಇದು ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಸೋಲಾರ್ ಮತ್ತು ಗಾಳಿಯಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ವ್ಯರ್ಥವಾಗದಂತೆ ಉಳಿಸಿಕೊಂಡು ಅದನ್ನು ಬೇಡಿಕೆ ಅವಧಿಯಲ್ಲಿ ತ್ವರಿತವಾಗಿ ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಲು ಪಿಎಸ್ ಪಿಗಳಿಂದ ಮಾತ್ರ ಸಾಧ್ಯ ಎಂಬುದಾಗಿ ಕೆಪಿಸಿಎಲ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ಸುರಂಗ ಮಾರ್ಗ ರಚಿಸಿದರೆ ಬೆಂಗಳೂರಿಗೆ ಆಪತ್ತು: MLC ಛಲವಾದಿ ನಾರಾಯಣಸ್ವಾಮಿ
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








