ಬೆಂಗಳೂರು: ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರವು ಇಡೀ ರಾಜ್ಯದಲ್ಲಿ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ಕೇಳಿದರೆ ದಾರಿ ತಪ್ಪಿಸುವ ಉತ್ತರಗಳನ್ನು ಕೊಡುತ್ತ ಬೇರೆ ಬೇರೆ ವಿಚಾರಗಳನ್ನು ಮಾತನಾಡುತ್ತಾರೆ. ರಸ್ತೆ ಗುಂಡಿ ಮುಚ್ಚಲು ಇವರಿಗೆ ಸಾಧ್ಯವಾಗಿಲ್ಲ; ಈಗ ರಸ್ತೆಯಲ್ಲಿ ಗುಂಡಿ ಇದೆಯ ಎಂದರೆ ಸರಕಾರದಲ್ಲೇ ಗುಂಡಿ ಬಿದ್ದಿದೆ ಎಂದು ಆರೋಪಿಸಿದರು.
ನಾಯಕರ ಮಕ್ಕಳಲ್ಲಿ ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಯತೀಂದ್ರ, ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಗ ಇಬ್ಬರೂ ಸೇರಿ ಕಾಂಗ್ರೆಸ್‍ಗೇ ಗುಂಡಿ ತೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‍ಗೇ ಗುಂಡಿ ತೋಡಿ ಈಗ ತಂದೆಯವರನ್ನೇ ಅಪಮಾನಗೊಳಿಸುವ ಮತ್ತು ಅವರನ್ನೇ ಜನರು ಈಗ ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ಅವರೇ ಉದ್ಭವ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಪೂರ್ಣ ಹದಗೆಟ್ಟ ಕಾನೂನು- ಸುವ್ಯವಸ್ಥೆ
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ನಾವು ನೂರಾರು ಬಾರಿ ಹೇಳಿದರೂ, ಅವರಿಗೆ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಒಂದು ಹೆಣ್ಮಗಳ ಮನೆಗೆ ನುಗ್ಗಿ 7 ಜನರು ಅತ್ಯಾಚಾರ ಮಾಡಿದ ದುರ್ಘಟನೆ ಬೆಂಗಳೂರಿನಲ್ಲಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಕೊಲೆಗಳೂ ನಡೆಯುತ್ತಿವೆ. ಮೈಸೂರಿನಲ್ಲಿ ದಲಿತರ ಹಸುಳೆಯ ಅತ್ಯಾಚಾರ ಮಾಡಿ ಸಾಯಿಸಿ ಬಿಸಾಡಿದ್ದಾರೆ ಎಂದು ಗಮನ ಸೆಳೆದರು.
ಗುಲ್ಬರ್ಗದ ಅಲೆಮಾರಿ ಸಮುದಾಯವನ್ನು ಕೇಳುವವರಿಲ್ಲ; ಬಿಜಾಪುರದಲ್ಲಿ 11 ವರ್ಷದ ಹೆಣ್ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ; ಇದರ ಕುರಿತು ಕೇಳಿದರೆ ಆರೆಸ್ಸೆಸ್ ಮತ್ತು ಬೇರೆಬೇರೆ ಮಾತನಾಡುತ್ತಾರೆ ಎಂದು ಆಕ್ಷೇಪಿಸಿದರು. ಸರಕಾರವು ಜನರ ಸಮಸ್ಯೆಗಳನ್ನು ಪರಿಹರಿಸಲು ಬಂದಿದೆಯೇ ಅಥವಾ ಮತ್ತಷ್ಟು ಸಮಸ್ಯೆಗಳನ್ನು ಉದ್ಭವ ಮಾಡಲು ಬಂದಿದೆಯೇ ಎಂದು ಅವರು ಪ್ರಶ್ನಿಸಿದರು.
ಕಾಲಹರಣ ಮಾಡುವುದನ್ನು ಬಿಡಲು ಒತ್ತಾಯ
ನಿಮ್ಮಿಂದ ಯಾರಿಗೆ ಪ್ರಯೋಜನವಾಗುತ್ತಿದೆ? ಇಡೀ ರಾಜ್ಯದ ಜನರು ನಿಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೂ ನೀವು ಎಚ್ಚತ್ತುಕೊಂಡಿಲ್ಲ. ಕಾಲಹರಣ ಮಾಡುವುದನ್ನು ಬಿಡಿ; ಮಳೆಗಾಲದ ಪರಿಸ್ಥಿತಿ ಎದುರಿಸುವುದು, ಇವತ್ತು ರಾಜ್ಯದ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಅಗತ್ಯವಿದ್ದು ನೀವು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರಕಾರ ಈ ರಾಜ್ಯಕ್ಕೆ ಮಾರಕವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ಸರಕಾರ ಇದಲ್ಲ ಎಂದು ಹೇಳಲು ಬಯಸುವುದಾಗಿ ತಿಳಿಸಿದರು. ದಾರಿ ತಪ್ಪಿಸುವ ಮಾತನಾಡುವುದು ಮತ್ತು ಹೊಣೆಗೇಡಿ ಸರಕಾರವಾಗಿ ಇವರು ವರ್ತಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗೊಂದಲಗಳನ್ನು ಸೃಷ್ಟಿಸುವುದರಲ್ಲಿ ಕಾಂಗ್ರೆಸ್ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಯತೀಂದ್ರ ಅವರ ಹೇಳಿಕೆ ನೋಡಿದ್ದೇನೆ. ನನ್ನ ತಂದೆಗೆ ವಯಸ್ಸಾಗಿದೆ. ಅವರ ರಾಜಕೀಯ ಹೆಚ್ಚು ಕಮ್ಮಿ ಮುಗಿದಂತಾಗಿದೆ. ಅವರ ನಾಯಕತ್ವದ ಅಂತ್ಯದ ದಿನಗಳಾಗಿವೆ. ಅದರಿಂದ ಅವರ ಜೊತೆ ಕೆಲಸ ಮಾಡಿದ ಜಾರಕಿಹೊಳಿಯವರು ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಇದು ಪಕ್ಷದ ತೀರ್ಮಾನವೇ ಎಂದು ಕೇಳಿದರು.
ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್: HD ಕುಮಾರಸ್ವಾಮಿ