ಬೆಂಗಳೂರು: ನಗರದಲ್ಲಿ 2 ದಿನ ಶಾಲೆಗೆ ಬಾರದಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಮೇಲೆ ಪ್ರಾಂಶುಪಾಲರು, ಶಿಕ್ಷಕರು ಹಲ್ಲೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಅದರಲ್ಲಿ ಬೆಂಗಳೂರಿನ ಸುಂಕದಕಟ್ಟೆ, ಪೈಪ್ ಲೈನ್ ರಸ್ತೆಯಲ್ಲಿರುವ ಸೆಂಟ್ ಮೆರೀಸ್ ಪಬ್ಲಿಕ್ ಶಾಲೆ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 5ನೇ ತರಗತಿ ವಿದ್ಯಾರ್ಥಿ ಎರಡು ದಿನಗಳ ಕಾಲ ಶಾಲೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ತೀವು ರೀತಿಯಲ್ಲಿ ದಂಡಿಸಿದ್ದು, ಈ ಘಟನೆಯಿಂದ ಆಘಾತಕ್ಕೆ ಒಳಗಾದ ಮಗುವು ವಿಚಿತ್ರ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು, ಮಗುವನ್ನು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದಿದೆ.
ಶಾಲೆಯವರ ಈ ವರ್ತನೆಗೆ ಬೇಸರಗೊಂಡ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ನ್ನು ದಾಖಲಿಸಿದ್ದು, ಠಾಣೆಯವರು ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿರುವ ವರದಿಯು ಪಸಾರವಾಗಿದ್ದು ಈ ವರದಿಯನ್ನಾಧರಿಸಿ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಆದ್ದರಿಂದ ತಾವು ಖುದ್ದಾಗಿ ಸದರಿ ಶಾಲೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಪರಿಶೀಲನ ನಡೆಸಿ, ಇಲಾಖಾ ನಿಯಮಾನುಸಾರ ಕ್ರಮ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 07 ದಿನಗಳ ಒಳಗಾಗಿ ಸಲ್ಲಿಸುವಂತೆ ಕೋರಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ‘ಇ-ಸ್ವತ್ತು’ ಸೌಲಭ್ಯ: ಪಾರದರ್ಶಕ ಆಡಳಿತದತ್ತ ಸರ್ಕಾರ ಮಹತ್ವದ ಹೆಜ್ಜೆ