ಶಿವಮೊಗ್ಗ: ಅಕ್ಟೋಬರ್.29, 2025ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಮುಖಂಡರು, ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸಲಾಗುತ್ತದೆ. ಆ ಬಳಿಕ ಮುಂದಿನ ನಡೆಯನ್ನು ಪ್ರಕಟಿಸುವುದಾಗಿ ರೈತ ಮುಖಂಡ ದಿನೇಶ್ ಶಿರವಾಳ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಸಾಗರದಲ್ಲಿ ಸತತ 12 ದಿನಗಳ ಕಾಲ ಅಹೋರಾತ್ರಿ ಧರಣಿ ಪ್ರತಿಭಟನೆಯನ್ನು ನಡೆಸಲಾಯಿತು. ಹೋರಾಟಕ್ಕೆ ಹಲವರು ಸಾಥ್ ನೀಡಿದರು. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಅಕ್ಟೋಬರ್.29, 2025ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿ ಹೋರಾಟದ ಮುಂದಿನ ನಡೆಯನ್ನು ಚರ್ಚಿಸುವ ಬಗ್ಗೆ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ವಿವಿಧ ಮಠಾಧೀಶರು, ರೈತ ಮುಖಂಡರು, ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷಗಳ ಬಗ್ಗೆ ಚರ್ಚಿಸಲಾಗುತ್ತದೆ. ಆ ಬಳಿಕ ನಮ್ಮ ಹೋರಾಟದ ನಡೆಯನ್ನು ಪ್ರಕಟಿಸುವುದಾಗಿ ಹೇಳಿದರು.
ಸಾಗರದಲ್ಲಿ ತಾಲ್ಲೂಕಿನಲ್ಲಿ ಉದ್ದೇಶಿಸಿರುವಂತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಜನರ ಆಶಯಗಳಿಗೆ ವಿರುದ್ಧವಾದಂತ ಯೋಜನೆಯಾಗಿದೆ. ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಪರಿಸರಕ್ಕೆ ಹಾನಿಯಾಗುವಂತ ಇಂತಹ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ನಾವು ಬಿಡುವುದಿಲ್ಲ. ಅದನ್ನು ನಿಲ್ಲಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
ಸಂಸದ ಬಿವೈ ರಾಘವೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ವಿಪಕ್ಷ ನಾಯಕರಾಗಿ ಈ ಯೋಜನೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕು. ರಾಜ್ಯ, ಹೊರ ರಾಜ್ಯದಲ್ಲೂ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಆದರೇ ಕರ್ನಾಟಕದಲ್ಲಿ ಚಕಾರವೆತ್ತದೇ ಇರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಸಂಸದರಿಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಏನು ಗೊತ್ತಿಲ್ಲ ಎಂಬುದನ್ನು ನಾವು ಒಪ್ಪುವುದಿಲ್ಲ. ಇಷ್ಟು ದೊಡ್ಡ ಯೋಜನೆಯ ಬಗ್ಗೆ ನಾಲ್ಕು ಬಾರಿ ಸಂಸದರಾದವರಿಗೆ ಸಂಪೂರ್ಣ ಮಾಹಿತಿ ಇದ್ದೇ ಇರಲಿದೆ ಎಂದರು.
ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಒತ್ತಾಯಿಸಿದ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದಂತ ಅವರು, ಕಲಸೆ ಚಂದ್ರಪ್ಪ ಅವರು ಹಿರಿಯರು. ಅವರಿಗೆ 10 ಸಾವಿರ ಅಲ್ಲ, 10 ಲಕ್ಷ ಜನರನ್ನು ಸೇರಿಸುವಂತ ಸಾಮರ್ಥ್ಯವಿದೆ ಎಂಬುದು ನನಗೆ ಗೊತ್ತಿದೆ. ಅವರು ಯಾವ ಉದ್ದೇಶದಿಂದ ಹೋರಾಟ ಮಾಡುವುದಾಗಿ ಹೇಳಿದ್ದಾರೋ ಅದು ಗೊತ್ತಿಲ್ಲ. ಅದನ್ನು ಅವರೇ ಸ್ಪಷ್ಟ ಪಡಿಸಬೇಕು ಎಂಬುದಾಗಿ ತಿಳಿಸಿದರು.
ಈ ವೇಳೆ ಮೇಘರಾಜ್ ಬೆಳ್ಳಂದೂರು, ಚಂದ್ರಪ್ಪ ಆಲಹಳ್ಳಿ, ರಾಮಚಂದ್ರಪ್ಪ, ದೇವರಾಜ್, ಮೈಲಾರಪ್ಪ, ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ದಿನಕ್ಕೆ 6 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡಿದರೆ ಏನಾಗುತ್ತೆ ಗೊತ್ತಾ.?