ಬೆಂಗಳೂರು: ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ತಿಳಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಇನ್ನೂ 9 ದಿನ ನಡೆಯಲಿರುವ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರನ್ನ ಬಳಕೆ ಮಾಡಿಕೊಳ್ಳದಿರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಮೀಕ್ಷಾದಾರರಿಗೆ ಮೂರು ದಿನ ರಜೆ:
ಮುಖ್ಯಮಂತ್ರಿಗಳ ನಿರ್ದೇಶನದಂತೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 20, 21 ಹಾಗೂ 22 ರಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆ ನೀಡಲಾಗಿದೆ. ಅ.23 ಮೂರರಿಂದ ಸಮೀಕ್ಷೆ ಪುನಃ ಪ್ರಾರಂಭವಾಗಲಿದೆ. ಆಯಾ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ವಿವಿಧ ಇಲಾಖೆಯ ಸಿಬ್ಬಂದಿಗಳನ್ನ ಬಳಸಿ ಅಕ್ಟೋಬರ್ 23 ರಿಂದ 31 ರವರೆಗೆ ಸಮೀಕ್ಷೆ ಕಾರ್ಯವನ್ನ ಪೂರ್ಣಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಹೊರತುಪಡಿಸಿ
ರಾಜ್ಯಾದ್ಯಂತ ಶೇಕಡ 95ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ರಾಮನಗರ ಶೇ.86%, ಧಾರವಾಡ ಶೇ.88% ಹಾಗೂ ಬೀದರ್ ಜಿಲ್ಲೆಗಳಲ್ಲಿ ಶೇ.79.46% ಸಮೀಕ್ಷೆ ಕಾರ್ಯ ತುಸು ಕುಂಠಿತವಾಗಿದೆ. ಬೆಂಗಳೂರಿನಲ್ಲಿ ಶೇಕಡ 45ರಷ್ಟು ಸಮೀಕ್ಷೆ ಕಾರ್ಯ ನಡೆದಿದೆ. ಬೆಂಗಳೂರಿನಲ್ಲಿ ತಡವಾಗಿ ಸಮೀಕ್ಷೆ ಪ್ರಾರಂಭವಾದ ಕಾರಣ ಸಮೀಕ್ಷೆ ಕಡಿಮೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ನೂರರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆ ಅಕ್ಟೋಬರ್ 31ರವರೆಗೆ ನಡೆಯಲಿದ್ದು, ಕೆಲ ಜಿಲ್ಲೆಗಳಲ್ಲಿ ಈ ಕಾರ್ಯ ಶೀಘ್ರವೇ ಪೂರ್ಣಗೊಳ್ಳಬಹುದು ಎಂದರು.
ಶಾಸಕರ ಮೂಲಕ ಜನತೆಗೆ ಜಾಗೃತಿ:
ಬೆಂಗಳೂರಿನ ಜನರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವಂತೆ ಶಾಸಕರಿಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ರವಾನೆಯಾಗಲಿದೆ ಎಂದು ಹೇಳಿದರು.
ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಿಳಿದು ಮಾತನಾಡಲಿ: ಸುಧಾಮೂರ್ತಿಯವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇನ್ಫೋಸಿಸ್ ನ ಸುಧಾಮೂರ್ತಿ ಅವರು ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಇಂತಹ ಹೇಳಿಕೆ ನೀಡುವ ಬದಲು ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸರ್ಕಾರ ನಡೆಸುತ್ತಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಈ ಸಮೀಕ್ಷೆಯಿಂದ ರಾಜ್ಯದ ಪ್ರತಿಯೊಂದು ಸಮುದಾಯದ ಅಥವಾ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಮಾಹಿತಿ ದೊರೆಯಲಿದೆ. ಇದು ಯಾವುದೋ ಹಿಂದುಳಿದ ವರ್ಗ, ಎಸ್ಸಿ ಮತ್ತು ಎಸ್ ಟಿ ಸಮುದಾಯಕ್ಕೆ ಮಾತ್ರ ಸೀಮಿತವಾದ ಸಮೀಕ್ಷೆಯಲ್ಲ. ದಯವಿಟ್ಟು ಜನರನ್ನ ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಸಿದರು.
ಧಾರವಾಡದಲ್ಲಿ ಶೇಕಡವಾರು ಸಮೀಕ್ಷೆ ಕಡಿಮೆಯಾಗಲು ರಾಜಕೀಯ ಕಾರಣಗಳು ಇರಬಹುದೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ಥಳೀಯ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನಾನು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನೀವು ಪಾಲ್ಗೊಳ್ಳಬೇಡಿ ಎಂದು ಜನರಿಗೆ ಹೇಳಿದರು. ಇಂತಹ ವರ್ತನೆ ನಿಜಕ್ಕೂ ಸರಿಯಲ್ಲ. ಜವಾಬ್ದಾರಿಯಲ್ಲಿ ಸ್ಥಾನದಲ್ಲಿರುವವರನ್ನು ಜನತೆ ಗಮನಿಸುತ್ತಿರುತ್ತಾರೆ. ಈ ಹಾಗಾದರೆ ನಾವು ಕೇಂದ್ರ ಸರ್ಕಾರ ನಡೆಸುವ ಗಣತಿಯನ್ನ ಭವಿಷ್ಯದಲ್ಲಿ ವಿರೋಧ ಮಾಡಬಹುದೇ? ದೊಡ್ಡ ಜವಾಬ್ದಾರಿಯಲ್ಲಿರುವವರು ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಖಾರವಾಗಿ ಪ್ರತಿಕ್ರಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ: ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು
ರಾಜ್ಯದ ‘ಗ್ರಾಮ ಪಂಚಾಯ್ತಿ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಪ್ರತಿ ತಿಂಗಳು ‘ವೇತನ ಪಾವತಿ’ಗೆ ಸರ್ಕಾರ ಖಡಕ್ ಆದೇಶ