ಬೆಂಗಳೂರು : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 18 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ ಡಿ.7ರಂದು ಅರ್ಹತಾ ಪರೀಕ್ಷೆ (ಟಿಇಟಿ) ನಿಗದಿಪಡಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅ.23ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನ.9ವರೆಗೆ ಅವಕಾಶ ಇರಲಿದೆ. ಡಿ.7ರಂದು ಪತ್ರಿಕೆ-1, ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಇನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ದಿನಾಂಕ 23-10-2025ರಿಂದ ದಿನಾಂಕ 09-11-2025ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದಿದೆ.
ಟಿಇಟಿ ಪರೀಕ್ಷೆ ದಿನಾಂಕ ಹೀಗಿದೆ
ಟಿಇಟಿ ಪರೀಕ್ಷೆಯು ಪತ್ರಿಕೆ-1ಕ್ಕೆ ದಿನಾಂಕ 07-12-2025ರ ಭಾನುವಾರ ಬೆಳಗ್ಗೆ 9.30ರಿಂದ 12 ಗಂಟೆಯವರೆಗೆ ನಡೆಯಲಿದೆ. ಪತ್ರಿಕೆ-2ರ ಪರೀಕ್ಷೆಯು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯಲಿದೆ ಎಂದಿದೆ.
ಅಭ್ಯರ್ಥಿಗಳು ಅರ್ಜಿಯನ್ನು https://schooleducation.karnataka.gov.in ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸದು ದಿನಾಂಕ 09-11-2025 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.
ಪರೀಕ್ಷಾ ಶುಲ್ಕದ ವಿವರ
ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿಗೆ ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ ರೂ.700, ಪತ್ರಿಕೆ-1 ಹಾಗೂ ಪತ್ರಿಕೆ-2ಕ್ಕೆ ರೂ.1000.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.300, ರೂ.500. ವಿಶೇಷ ಚೇತನ, ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯ ಸಂಪೂರ್ಣ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ https://schooleducation.karnataka.gov.in ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.