ಬೆಂಗಳೂರು : ಹುಲಿ, ಆನೆ ಸೇರಿದಂತೆ ಯಾವುದೇ ವನ್ಯಜೀವಿಯ ಸೆರೆ ಅಥವಾ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಪ್ರಮಾಣಿತ ಕಾರ್ಯವಿಧಾನ (ಎಸ್.ಓ.ಪಿ.) ರೂಪಿಸಿ ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಅವರು, ಯಾವುದೇ ಕಾರ್ಯಾಚರಣೆ ವೇಳೆ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಅಂಚಿನಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಮರಳಿ ಕಾಡಿಗೆ ಕಳಿಸುವ ಪ್ರಯತ್ನ ನಡೆಯುತ್ತಿದ್ದಾಗ ಸರಗೂರು ತಾಲೂಕು ಬಡಗಲಪುರದ ಬಳಿ ಹುಲಿ ರೈತ ಮಹದೇವ ಎಂಬುವವರ ಮೇಲೆ ದಾಳಿ ಮಾಡಿದ್ದು, ಕಣ್ಣು ಮತ್ತು ಮುಖಕ್ಕೆ ತೀವ್ರ ಸ್ವರೂಪದ ಗಾಯವಾಗಿ, ದೃಷ್ಟಿಯೇ ಹೋಗಿರುವುದಾಗಿ ವರದಿಯಾಗಿದೆ ಇದೊಂದು ದುರ್ದೈವದ ಘಟನೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ತೀವ್ರ ಗಾಯಗೊಂಡಿರುವ ವ್ಯಕ್ತಿಗೆ ನಿಯಮಾನುಸಾರ ಪರಿಹಾರ ನೀಡಲು ಮತ್ತು ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ತುರ್ತು ಕ್ರಮ ವಹಿಸಲು ಸೂಚಿಸಿರುವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಘಟನೆಗೆ ಕಾರಣವಾಗಿದ್ದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲೂ ಸೂಚಿಸಿದ್ದಾರೆ.
ಕಾರ್ಯಾಚರಣೆ ನಡೆಸುವ ಮುನ್ನ ಸಾರ್ವಜನಿಕರನ್ನು ಸ್ಥಳದಿಂದ ಕಳುಹಿಸಬೇಕು ಮತ್ತು ಮೊದಲೇ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದೂ ತಿಳಿಸಿದ್ದಾರೆ.