ಬೆಂಗಳೂರು: ರಾಜ್ಯದ ಸರ್ಕಾರಿ ಸ್ಥಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ( RSS) ಚಟುವಟಿಕೆ ನಿಷೇಧಿಸುವಂತೆ ಸಚಿವ ಪ್ರಿಯಾಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಬಿಜೆಪಿ, RSS ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲೇ, ನಿಷೇಧ ಮಾಡಿ ನೋಡಿ ಎಂಬುದಾಗಿ ಸವಾಲ್ ಹಾಕಿದ್ದರು. ಇದರ ನಡುವೆ ರಾಜ್ಯದ ಸರ್ಕಾರಿ ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮವನ್ನು ಬ್ಯಾನ್ ಮಾಡಲಾಗಿತ್ತು. 2013ರಲ್ಲಿಯೇ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ್ದಂತ ಆದೇಶ ಪತ್ರ ಈಗ ವೈರಲ್ ಆಗಿದೆ.
ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆಗೂ ಈ ಸಂಬಂಧ ಬೆದರಿಕೆ ಹಾಕಲಾಗಿತ್ತು. ಇದೀಗ ಬೆದರಿಕೆ ಹಾಕಿದಂತ ವ್ಯಕ್ತಿಯನ್ನು ಪತ್ತೆ ಹಚ್ಚಿರುವಂತ ಪೊಲೀಸರು, ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯಗೆ ಮತ್ತೊಂದು ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ
ಸಿಎಂ ಸಿದ್ಧರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು, 2021ರ ಅಡಿಯ ನಿಯಮ 5(1)ರಲ್ಲಿಯೇ ಯಾರೇ ಸರ್ಕಾರಿ ನೌಕರನ, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ. ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂಬುದಾಗಿ ಹೇಳಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಂಯ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದೆಂದು ತಿಳಿಸುವ ಸುತ್ತೋಲೆಯನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ.
2013ರಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮ ಆಯೋಜನೆ ನಿಷೇಧ, ಪತ್ರ ವೈರಲ್
ಇದರ ನಡುವೆ 2013ರಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನಗಳನ್ನು ಅನುಮತಿಯನ್ನು ನೀಡಬಾರದು ಎಂಬುದಾಗಿ ಆದೇಶಿಸಿದಂತ ಆದೇಶ ಪತ್ರವು ವೈರಲ್ ಆಗಿದೆ.
ವೈರಲ್ ಆಗಿರುವಂತ ಆದೇಶ ಪತ್ರದಲ್ಲಿ ದಿನಾಂಕ 07-02-2013ರಲ್ಲಿ ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದಂತ ಎಸ್.ಆರ್ ಉಮಾಶಂಕರ್ ಅವರು, ಬೆಂಗಳೂರು ದಕ್ಷಿಣದ ಉಪನಿರ್ದೇಶಕರು(ಆಡಳಿತ) ಇವರು ಖಾಸಗಿ ಸಂಸ್ಥೆಗಳ ಮನವಿಯ ಮೇರೆಗೆ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ, ಕೋಟೆ, ಚಾಮರಾಜಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ನಡೆಸುವ ಬಗ್ಗೆ ಅನುಮತಿ ಕೋರಿದ್ದಾರೆ ಎಂದಿದ್ದಾರೆ.
ಈ ಕುರಿತು ಪರಿಶೀಲಿಸಲಾಗಿದ್ದು, ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗವಾಗಬೇಕು ಎಂದಿದ್ದಾರೆ.
ಆದುದ್ದರಿಂದ ಶಾಲಾ ಮೈದಾನ, ಆವರಣವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ, ಉದ್ದೇಶಗಳಿಗೆ ಬಳಸಬಾರದು ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದ್ದಾರೆ.
ಈ ರೀತಿಯ ಖಾಸಗಿ, ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶಾಲಾ ಮೈದಾನ, ಆವರಣವನ್ನು ಬಳಸುವ ಅನುಮತಿಗಾಗಿ ಈ ಕಚೇರಿಗೆ ಪ್ರಸ್ತಾವನೆಗಳು, ಮನವಿಯನ್ನು ಸಲ್ಲಿಸ ಬಾರದಾಗಿಯೂ ಸಹ ಖಡಕ್ ಸೂಚನೆ ನೀಡಲಾಗಿದೆ.
ಒಟ್ಟಾರೆಯಾಗಿ ರಾಜ್ಯದ ಶಾಲಾ ಅವರಣದಲ್ಲಿ ಶೈಕ್ಷಣಿಕ ಚಟುವಟಿಕೆಯ ಹೊರತಾಗಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿಯಿಲ್ಲ ಎಂಬುದು ಆದೇಶದಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ಶಾಲಾ ಆವರಣದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಡೆಸುವುದು ನಿಷೇಧ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಿದಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಇಂಡೋನೇಷ್ಯಾದ ಪಪುವಾದಲ್ಲಿ 6.7 ತೀವ್ರತೆಯಲ್ಲಿ ಪ್ರಬಲ ಭೂಕಂಪ | Earthquake hits Indonesia