ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆ ನಿರ್ಬಂಧಿಸುವ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿಷೇಧ ಹೇರಿ ಈ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದೆ.
ಆರ್.ಎಸ್.ಎಸ್. ಮಾತ್ರವಲ್ಲ, ಬೇರೆ ಯಾವುದೇ ಸಂಘಟನೆಯೂ ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗದಲ್ಲಿ ಚಟುವಟಿಕೆ ನಡೆಸಬಾರದು. ತಮಿಳುನಾಡಿನಲ್ಲಿ ಇದನ್ನು ನಿಷೇಧ ಮಾಡಿದ್ದರೆ ಅಲ್ಲಿಯ ವಿಧಾನ ನೋಡಿಕೊಂಡು ವರದಿ ಪಡೆದು ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ನಡುವೆ ಹಳೆಯ ಆದೇಶದ ಪ್ರತಿ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ಆದೇಶ ಹೀಗಿದೆ : ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನಗಳನ್ನು ಅನುಮತಿ ನೀಡುವ ಬಗ್ಗೆ 2013ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಉಪನಿರ್ದೇಶಕರು (ಆಡಳಿತ), ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಖಾಸಗಿ ಸಂಸ್ಥೆಗಳ ಮನವಿಯ ಮೇರಗೆ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ, ಕೋಟೆ, ಚಾಮರಾಜಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ನಡೆಸುವ ಬಗ್ಗೆ ಅನುಮತಿ ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ, ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪಠ್ಯತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿವಿನಿಯೋಗವಾಗಬೇಕು.
ಆದ್ದರಿಂದ, ಶಾಲಾ ಮೈದಾನ / ಆವರಣವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ / ಉದ್ದೇಶಗಳಿಗೆ ಬಳಸಬಾರದಾಗಿ ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದೆ.
ಮುಂದುವರೆದು, ಈ ರೀತಿಯ ಖಾಸಗಿ/ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಸಂಬಂದಿಸಿದಂತೆ ಶಾಲಾ ಮೈದಾನ/ಆವರಣವನ್ನು ಬಳಸಲು ಅನುಮತಿಗಾಗಿ ಈ ಕಛೇರಿಗೆ ಪ್ರಸ್ತಾವನೆಗಳು/ಮನವಿಗಳನ್ನು ಸಲ್ಲಿಸ ಬಾರದಾಗಿಯೂ ಸಹಾ ಸೂಚಿಸಿದೆ.