ಚಾಮರಾಜನಗರ : ಮದುವೆಗೆ ಹೆಣ್ಣು ಸಿಗುತ್ತಿಲ್ಲ ದಯವಿಟ್ಟು ಕರುಣೆ ತೋರಿಸಿ ವಧುವನ್ನ ಹುಡುಕಿ ಕೊಡು ಎಂದು ಮಲೆ ಮಹದೇಶ್ವರನನ್ನು ಮನಸಲ್ಲಿ ಪ್ರಾರ್ಥಿಸಿ ಯುವಕರ ದಂಡೊಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಬರಿಗಾಲಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.
ಹೌದು ಇಂತಹ ಒಂದು ಅಚ್ಚರಿ ಮೂಡಿಸುವಂತಹ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ದೀಪಾವಳಿಯಂದು ಈ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಈ ರೀತಿ ಒಂದು ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಮದುವೆಗೆ ಕನ್ಯೆ ಸಿಗಲಿ ಎಂದು ಮೂರು ಗ್ರಾಮಗಳ ನೂರಾರು ಸಂಖ್ಯೆಯ ರೈತರು ಹಾಗೂ ಯುವಕರು ಪಾದಯಾತ್ರೆ ಮೂಲಕ ಮಾದಪ್ಪನ ಮೊರೆ ಹೋಗಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು, ಭೀಮನಬೀಡು, ಕೊಡಹಳ್ಳಿಯ ನೂರಾರು ಮಂದಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. 200 ಕಿ.ಮೀ.ಗಿಂತ ಹೆಚ್ಚು ದೂರ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಲಾಗಿದ್ದು, ದಾರಿಯುದ್ದಕ್ಕೂ ಭಕ್ತರಿಂದ ಉಘೇ ಉಘೇ ಮಾದಪ್ಪ ಎಂಬ ಘೋಷಣೆ ಕೇಳಿಬಂದಿದೆ.