ಮಂಡ್ಯ : ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಒಂದು ವಾರದಲ್ಲಿ ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸೂಚಿಸಿದ್ದಾರೆ.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಿಂದ ಮದ್ದೂರು ನಗರದ ಪ್ರವಾಸಿ ಮಂದಿರದವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಸೀಲ್ದಾರ್, ಭೂಸ್ವಾಧೀನ ಅಧಿಕಾರಿಗಳು, ಎಂಜಿನಿಯರ್, ಗುತ್ತಿಗೆದಾರರು ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳ ಜತೆಗೂಡಿ ಶಾಸಕ ಉದಯ್ ಅಪೂರ್ಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಉದಯ್, ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಉದ್ಘಾಟನೆಯಾಗಿ ಮೂರು ವರ್ಷಗಳಾಗುತ್ತಿದೆ. ಆದರೆ, ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಈಗಾಗಲೇ ಕಾಮಗಾರಿ ಸಂಬಂಧ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಯೋಜನಾ ಪ್ರಾಧಿಕಾರದ ಅಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ್ದು, ಇನ್ನೊಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾಮಗಾರಿಗೆ ಸಂಬಂಧ ಪಟ್ಟಂತೆ ಭೂಸ್ವಾಧೀನ ಪ್ರಕ್ರಿಯೆಗಳೆಲ್ಲ ಮುಗಿದಿದೆ. ಕಾಮಗಾರಿಯನ್ನು ನಡೆಸಲು ಅನುದಾನದ ಕೊರತೆಯಿಲ್ಲ. ಈಗಾಗಲೇ ಜಮೀನು ಮಾಲೀಕರಿಗೂ ಪರಿಹಾರ ವಿತರಣೆ ಮಾಡಲಾಗಿದೆ. ಆದರೆ, ಚರಂಡಿ, ಸರ್ವಿಸ್ ರಸ್ತೆ, ಹಾಗೂ ನಾಲೆಗಳ ಕಾಮಗಾರಿಗಳನ್ನು ಕೈಗೊಂಡಿದ್ದ ವೇಳೆಯಲ್ಲಿ ಕೆಲವರ ವಿರೋಧ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಇದರಲ್ಲಿ ಸಾರ್ವಜನಿಕರು ಕೂಡ ಸಹಕಾರ ನೀಡದ ಪರಿಣಾಮ ಅಪೂರ್ಣ ಕಾಮಗಾರಿಯಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಡಿಬಿಎಲ್ ಕಂಪನಿಗೆ ನೀಡಲಾಗಿತ್ತು. ಆದರೆ, ಎಕ್ಸ್ ಪ್ರೆಸ್ ಹೈಯನ್ನು ಪೂರ್ಣಗೊಳಿಸಿ ಉಳಿದ ಕಾಮಗಾರಿಗಳನ್ನು ಅಪೂರ್ಣ ಮಾಡಿ ಹೋಗಿದ್ದಾರೆ. ಈಗ ಆ ಕಾಮಗಾರಿಗಳನ್ನು ಮಾಡಲು ಅವರ ಅವಧಿ ಮುಗಿದಿದೆ. ಹೀಗಾಗಿ ಸ್ಥಳೀಯ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಲು ಸಚಿವರ ಸಭೆಯಲ್ಲಿ ತೀರ್ಮಾನಿಸಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಳಿಕೆ ಕಾಮಗಾರಿಗಳಿಗೆ ಅನುದಾನ ನೀಡಲಿದ್ದು, ಎರಡು ಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
ಶಿಂಷಾ ನದಿಯ ಸರ್ವಿಸ್ ರಸ್ತೆಗೆ ಅಡ್ಡಲಾಗಿ ಮತ್ತೋಂದು ಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಕ್ರಿಯಾಯೋಜನೆ ರೂಪಿಸಲಿರಲಿಲ್ಲ. ಮುಖ್ಯಮಂತ್ರಿಗಳು ಹೆದ್ದಾರಿ ವೀಕ್ಷಣೆಗೆ ಆಗಮಿಸಿದ್ದ ವೇಳೆ ನಾನು ಶಿಂಷಾ ನದಿಗೆ ಮತ್ತೋಂದು ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ್ದೆ, ಹೀಗಾಗಿ ಮುಖ್ಯಮಂತ್ರಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ವ್ಯವಹಾರ ಮಾಡಿ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರಿಗೆ ಕಾಳಜಿ ಇಲ್ಲ
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಳಜಿ ಇಲ್ಲ ಎಂದು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಕೇಂದ್ರ ಸಚಿವರಾಗಿ ಒಂದುವರೇ ವರ್ಷವಾಗುತ್ತಿದೆ. ಹೆದ್ದಾರಿ ಕಾಮಗಾರಿ ಬೇರೆ ರಸ್ತೆಗಳಿಗಿಂತ ಅವೈಜ್ಞಾನಿಕವಾಗಿದೆ. ಆದರೆ, ಸಂಸದರಾಗಿ, ಕೇಂದ್ರ ಸಚಿವರಾಗಿ ಇಲ್ಲಿಯವರೆಗೂ ಒಂದೇ ಒಂದು ಬಾರಿ ಅಪೂರ್ಣ ಕಾಮಗಾರಿಗಳ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳುವ ಯೋಚನೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ನಾಲ್ಕು ತಿಂಗಳಿಗೊಮ್ಮೆ ನಡೆಯುವ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟರೆ ಸಾಲದು. ಎಲ್ಲಿ ರಸ್ತೆ ಗುಂಡಿ ಬಿದ್ದಿದೆ, ಎಲ್ಲಿ ಚರಂಡಿ ಕಾಮಗಾರಿ ಆಗಿಲ್ಲ, ಸರ್ವಿಸ್ ರಸ್ತೆಗಳ ಕಾಮಗಾರಿ ಆಗಿಲ್ಲ, ಎಲ್ಲಿ ಜನರಿಗೆ ತೊಂದರೆಯಾಗ್ತಿದೆ ಅಂತ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಅದು ಬಿಟ್ಟು ಕಾಟಾಚಾರದ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಹೋದರೆ ಪ್ರಯೋಜನವಾಗಲ್ಲ. ನಾವು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಲೋಪದೋಷಗಳನ್ನು ರಾಜ್ಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕುಮಾರಸ್ವಾಮಿ ಅವರನ್ನು ಕುಟುಕಿದರು.
ಇನ್ನು ಹಲಗೂರು ರಾಜ್ಯ ಹೆದ್ದಾರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಲಿಂಕ್ ರಸ್ತೆ ಮಾಡದ ಪರಿಣಾಮ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು ನೋವುಗಳಾಗುತ್ತಿವೆ ಎಂದು ತಾ.ಪಂ ಮಾಜಿ ಸದಸ್ಯ ಚಲುವರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಸರ್ವಿಸ್ ರಸ್ತೆಯಿಂದ ಹಲಗೂರು ರಸ್ತೆಗೆ ಲಿಂಕ್ ರಸ್ತೆ ಮಾಡಲು ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳದಿರುವುದು ಏಕೆ ಎಂದು ಶಾಸಕರ ಮುಂದೆ ಪ್ರಶ್ನಿಸಿದರು. ಇನ್ನು ಕೆಲ ದಿನಗಳಲ್ಲೇ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಾಬ್ಲೆ, ಎಂಜಿನಿಯರ್ ಅರುಣ್, ಮುಖಂಡರಾದ ಸತೀಶ್, ವಿಜಯ್ ಕುಮಾರ್, ಲೋಕೇಶ್, ಮಹೇಶ್, ಯತೀಶ್, ಪುಟ್ಟಪ್ಪ, ರಾಜು, ಅಪ್ಪೇಗೌಡ, ಬೊಮ್ಮಯ್ಯ, ಸತೀಶ್, ಶ್ರೀನಿವಾಸ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ
‘RSS ಚಟುವಟಿಕೆ’ ಏಕೆ ನಿರ್ಬಂಧಿಸಬೇಕು ಗೊತ್ತಾ? ಇಲ್ಲವೆ ‘MLC ರಮೇಶ್ ಬಾಬು’ ಕೊಟ್ಟ ಕಾರಣಗಳು