ಶಿವಮೊಗ್ಗ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನದಿಸಿದ ನ್ಯಾಯವಾದಿ ರಾಕೇಶ್ ಕಿಶೋರ್ ಅವರನ್ನು ಗಡಿಪಾರು ಅಥವಾ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಇವರ ಹಿಂದೆ ಯಾರು ಯಾರು ಇದ್ದಾರೆ ಎನ್ನುವುದನ್ನು ತನಿಖೆ ನಡೆಸಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಇಂದು ಸಾಗರದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಗವಾಯಿ ದಲಿತ ಸಮುದಾಯಕ್ಕೆ ಸೇರಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಸಿದ್ದಾಂತದ ಆಧಾರದ ಮೇಲೆ ಅತ್ಯಂತ ಘನತೆಯಿಂದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಅ.6ರಂದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ 71 ವರ್ಷದ ರಾಕೇಶ್ ಕಿಶೋರ್ ಎಂಬ ವಕೀಲರು ತನ್ನ ಕಾಲಿನ ಶೂ ಅನ್ನು ತೆಗೆದು ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ. ಇದು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕರಾಳ ದಿನವಾಗಿದೆ. ಪ್ರಜ್ಞಾವಂತ ನಾಗರೀಕರು ಈ ಕೃತ್ಯದಿಂದ ತಲೆತಗ್ಗಿಸುವಂತೆ ಅಗಿದೆ ಎಂದು ಮನವಿ ಮಾಡಲಾಯಿತು.
ರಾಕೇಶ್ ಕಿಶೋರ್ ತೋರಿಸಿರುವ ಅಸಹನೆ ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ಜಾತಿಯತೆ, ತಾರತಮ್ಯ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಗಟ್ಟಿಯಾಗಿ ಉಳಿದುಕೊಂಡಿದೆ ಎನ್ನುವುದನ್ನು ಈ ಘಟನೆ ಸಾಬೀತುಪಡಿಸಿದೆ. ಗವಾಯಿ ಅವರು ನ್ಯಾಯಾಧೀಶರಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಕೇಶ್ ಕಿಶೋರ್ ದರ್ಮದ ಹೆಸರಿನಲ್ಲಿ ಅಸಹನೆಯನ್ನು ಹುಟ್ಟುಹಾಕುವ ಭಯೋತ್ಪಾದಕರಂತೆ ನಡೆದುಕೊಂಡಿದ್ದಾರೆ. ಸಮ ಸಮಾಜದ ಮಧ್ಯೆ ಜಾತಿಯ ವಿಷಬೀಜ ಬಿತ್ತುವ ಸನಾತನ ಮನುವಾದಿ ಭಯೋತ್ಪಾದಕ ರಾಕೇಶ್ ಕಿಶೋರ್ ಅವರಿಗೆ ಕಾಣದ ಕೈಗಳು ಪ್ರಚೋದನೆ ನೀಡಿರುವುದು ಕಂಡು ಬರುತ್ತದೆ. ತಕ್ಷಣ ರಾಕೇಶ್ ಕಿಶೋರ್ ಅವರನ್ನು ದೇಶದಿಂದ ಗಡಿಪಾರು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿತು.
ಈ ಪ್ರತಿಭಟನೆ ಉದ್ದೇಶಿಸಿ ಲಕ್ಷ್ಮಣ್ ಸಾಗರ್, ನಾಗರಾಜ್, ನಟರಾಜ ಗೇರುಬೀಸು, ರೇವಪ್ಪ ಹೊಸಕೊಪ್ಪ, ಲಲಿತಮ್ಮ ಇನ್ನಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಧರ್ಮರಾಜ್, ಅಣ್ಣಪ್ಪ ಕೆಳದಿಪುರ, ಶಿವಾನಂದ ಕುಗ್ವೆ, ಚಾರ್ವಕ ರಾಘವೇಂದ್ರ, ರಂಗಪ್ಪ ಹೊನ್ನೆಸರ, ನಾರಾಯಣ ಮಂಡಗಳಲೆ, ಗಣಪತಿ ಇರುವಕ್ಕಿ, ಮಧುಮಾಲತಿ, ಎಲ್.ಚಂದ್ರಪ್ಪ, ನಾರಾಯಣ ಅರಮನೆಕೇರಿ, ಸರಸ್ವತಿ ನಾಗರಾಜ್, ಮರಿಯಾ ಲೀಮಾ ಇನ್ನಿತರರು ಹಾಜರಿದ್ದರು.
ಸಾಗರದಲ್ಲಿ ಯಶಸ್ವಿಯಾಗಿ ನಡೆದ ‘ಗಾಂಧಿ ಸ್ಮೃತಿ’ ಮತ್ತು ‘ವ್ಯಸನ ಮುಕ್ತ’ರ ಸಮಾವೇಶ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೆಂದು ಮನೆಯಿಂದಲೇ ಪ್ರತಿಭಟನೆ ಧ್ವನಿ ಬರಬೇಕು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್