ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಆಘಾತಕಾರಿ ಯೋಜನೆ. ಇದರ ಶವ ದಹನವಾಗಲೇಬೇಕು. ಯೋಜನೆ ಬೇಡ ಎಂದು ಪ್ರತಿಯೊಂದು ಮನೆಯಿಂದಲೂ ಪ್ರತಿಭಟನೆ ಧ್ವನಿ ಬರಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಕರೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ 10ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಸುರಂಗ ಮಾರ್ಗ ತೋಡಿ ಯೋಜನೆ ಅನುಷ್ಟಾನಕ್ಕೆ ತಂದರೆ ಪರಿಸರದ ಮೇಲಾಗುವ ದುಷ್ಟರಿಣಾಮದ ಬಗ್ಗೆ ಸರ್ಕಾರ ಯೋಜನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ವಿದ್ಯುತ್ ದೊಡ್ಡದೋ, ಮನುಷ್ಯ, ಜೀವವೈವಿಧ್ಯದ ಬದುಕು ದೊಡ್ಡದೋ ಎನ್ನುವುದನ್ನು ಸರ್ಕಾರ ಮೊದಲು ನಿರ್ಧಾರ ಕೈಗೊಳ್ಳಬೇಕು. ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ. ಮನುಷ್ಯ ಬದುಕು ನಾಶ ಮಾಡುವ ಯೋಜನೆ ನಮಗೆ ಬೇಡ. ಪಶ್ಚಿಮಘಟ್ಟ ಇಷ್ಟು ದೊಡ್ಡ ಯೋಜನೆಯನ್ನು ಹೊರುವ ಶಕ್ತಿ ಹೊಂದಿಲ್ಲ. ಈ ನಿಟ್ಟಿನಲ್ಲಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಸಮಯೋಚಿತವಾಗಿದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ಸ್ಥಳೀಯ ಶಾಸಕರು, ಸಂಸದರು ಯೋಜನೆ ವಿರೋಧಿಸಬೇಕು. ಯೋಜನೆ ವಿರೋಧಿಸುವಾಗ ಪಕ್ಷಪಾರ್ಟಿ ನೋಡಬೇಡಿ. ಜಿನಜೀವನದ ಬಗ್ಗೆ ಗಮನಿಸಿ. ತಕ್ಷಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಟಾನವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಮೋರ್ಚಾದ ಪ್ರಮುಖರಾದ ಪ್ರಸನ್ನ ಕೆರೆಕೈ ಮಾತನಾಡಿ, ಪಶ್ಚಿಮಘಟ್ಟ ಸುಸ್ಥಿರವಾಗಿದೆ ಪ್ರಪಂಚವೇ ಆರೋಗ್ಯಕರವಾಗಿರುತ್ತದೆ ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ. ಆದರೆ ಪಶ್ಚಿಮಘಟ್ಟದ ಪರಿಸರದ ಅಸ್ತಿತ್ವವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಟಾನಕ್ಕೆ ತರಬಾರದು. ಸ್ಥಳೀಯ ಶಾಸಕರು ಶಾಸನ ಸಭೆಯಲ್ಲಿ ಯೋಜನೆ ಪರವಾಗಿ ಮಾತನಾಡಿದ್ದು ಬೇಸರ ತರಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧಕ ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು. ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ರೈತರ ಪ್ರತಿಭಟನೆ ಶತಾಯುಷಿ ಬಂಗಾರಮ್ಮ ಸಾಥ್
ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ 10ನೇ ದಿನದ ಹೋರಾಟದಲ್ಲಿ ನೇರಗಲಿ ಗ್ರಾಮದ 100 ವರ್ಷದ ಶತಾಯುಷಿ ಬಂಗಾರಮ್ಮ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಹೋರಾಟಕ್ಕೆ ಬೆಂಬಲ ಸೂಚಿಸಿ ರೈತ ಸಂಘ ಏರ್ಪಡಿಸುವ ಸಹಿ ಸಂಗ್ರಹದಲ್ಲೂ ಅವರು ಹೆಬ್ಬೆಟ್ಟು ಒತ್ತುವ ಮೂಲಕ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಮಲ್ಲಿಕಾರ್ಜುನ ಹಕ್ರೆ, ಗಣಪತಿ ಹೆನಗೆರೆ, ರಮೇಶ್ ಕೆಳದಿ, ಭದ್ರೇರ್ಶ ಬಾಳಗೋಡು, ಡಾ. ರಾಮಚಂದ್ರಪ್ಪ, ಕಬಸೆ ಅಶೋಕ ಮೂರ್ತಿ, ಸ್ವಾಮಿ ಗೌಡ ಇನ್ನಿತರರು ಹಾಜರಿದ್ದರು.
‘MBBS ವ್ಯಾಸಂಗ’ದ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: 3ನೇ ಸುತ್ತಿಗೆ ಹೆಚ್ಚುವರಿ ‘200 ವೈದ್ಯಕೀಯ ಸೀಟು’ ಲಭ್ಯ
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!