ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಸದ್ಯದಲ್ಲೇ ಬೆಂಗಳೂರಿನಲ್ಲಿ ತ್ರೀವತರ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಮಡಿವಾಳ ಎಸ್. ಸಿ. ಹೋರಾಟ ಕೇಂದ್ರ ಸಮಿತಿ ತೀರ್ಮಾನಿಸಿದೆ.
ಭಾನುವಾರ ಕೆಂಪೇಗೌಡ ನಗರದ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಎಸ್. ಸಿ. ಹೋರಾಟ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಎಸ್. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಮಡಿವಾಳ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಮಡಿವಾಳ ಸಮುದಾಯವು ಅತ್ಯಂತ ಹಿಂದುಳಿದಿದೆ. ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿಯೂ ಅತ್ಯಂತ ದುರ್ಬಲವಾಗಿದೆ. ರಾಜಕೀಯವಾಗಿಯೂ ಬಲ ಇಲ್ಲದೆ ತೀರಾ ನಿಶಕ್ತವಾಗಿದೆ. ಸ್ವಾತಂತ್ರ್ಯ ನಂತರದ ಬಂದ ಸರ್ಕಾರಗಳು ಈವರೆಗೂ ಮೇಲೆತ್ತುವ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದೆ.
ಆಳುವ ಸರ್ಕಾರಗಳಿಗೆ ಕಣ್ಣಿಲ್ಲ
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜಿ.ಡಿ ಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಸರ್ಕಾರಗಳಿಗೆ ಒತ್ತಾಯಿಸುತ್ತಲೆ ಬರಲಾಗುತ್ತಿದೆ. ಆದರೂ ಆಳುವ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಮಡಿವಾಳರ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಡಾ. ಅನ್ನಪೂರ್ಣಮ್ಮ ವರದಿಯನ್ನು ಕೂಡ ಕಳೆದ ಬಿಜೆಪಿ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರಗಳು ಮಾಡಿಲ್ಲ ಎಂದು ಆಪಾದಿಸಿದರು.
15 ರಾಜ್ಯಗಳಲ್ಲಿ ಎಸ್ಸಿಗೆ ಸೇರ್ಪಡೆ
ಸಮಿತಿಯ ರಾಜಗೋಪಾಲ್ ಮಾತನಾಡಿ, ದೇಶದ 15 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳರನ್ನು ಈಗಾಗಲೇ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಯಾವ ಸರ್ಕಾರಗಳು ಕೂಡ ಮಾಡಿಲ್ಲ. ಈಗ ಅಂತಿಮವಾಗಿ ಹೋರಾಟವೇ ಅನಿವಾರ್ಯ. ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡುವರಿಗೂ ಅನಿರ್ದಿಷ್ಟಾವಧಿಯ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಸಿದರು.
ಪ್ರಬಲ ಜಾತಿಗಳು ಎಸ್ಸಿ ಸೇರ್ಪಡೆಗೆ ಯತ್ನ
ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್. ವೆಂಕಟೇಶ್ ಮಾತನಾಡಿ, ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಅನೇಕ ಸಮುದಾಯಗಳು ಆರ್ಥಿಕ ಹಾಗೂ ರಾಜಕೀಯವಾಗಿ ಬಹಳ ಪ್ರಬಲವಾಗಿವೆ. ಆದರೂ, ಅಂತಹ ಜಾತಿಗಳೆ ಈಗ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡುವಂತೆ ಹಕ್ಕೋತ್ತಾಯ ಮಾಡುತ್ತಿವೆ. ಆದರೆ, ಹಿಂದುಳಿದ ಜಾತಿಗಳಲ್ಲೇ ಅತ್ಯಂತ ನಿಕೃಷ್ಟವಾಗಿರುವ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡದಿರುವುದು ಅತ್ಯಂತ ನೋವಿನ ಸಂಗತಿ. ಸರ್ಕಾರದ ವಿರುದ್ಧ ಧ್ವನಿ ಎತ್ತಲು ಕೂಡ ಧ್ವನಿ ಇಲ್ಲದಂತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮಡಿವಾಳರಿದ್ದು, ಇನ್ನು ಬಹುತೇಕ ಕುಟುಂಬಗಳು ತಮ್ಮ ಕುಲ ಕಸಬನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿವೆ. ಮೀಸಲಾತಿ ಇಲ್ಲದೆ ಇನ್ನೂ ಈ ಸಮುದಾಯ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ವಂಚನೆಗೆ ಒಳಗಾಗಿದೆ. ಹಾಗಾಗಿ, ಸರ್ಕಾರ ಕೂಡಲೇ ಮಡಿವಾಳರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಎದುರಿಸಬೇಕಾದೀತೆಂದು ಎಚ್ಚರಿಸಿದರು.
ಈ ಸಭೆಯಲ್ಲಿ ಶ್ರೀಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ ನಂಜಪ್ಪ, ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಹಿರಿಯ ತೆರಿಗೆ ಅಧಿಕಾರಿ ಶಿವಾನಂದ ಕಲ್ಕೇರಿ, ವಕೀಲ ಕೇಶವ, ಸಮುದಾಯದ ಮುಖಂಡರಾದ ಬಿ.ಕೆ. ಧನಂಜಯ, ದಾವಣಗೆರೆಯ ಉಮಾಪತಿ, ಪಾಪಣ್ಣ (ವೆಂಕಟರಮಣ), ಸುಜಾತ ಮಯೂರಿ, ರಾಜಗೋಪಾಲ್, ಹನುಮಂತಪ್ಪ, ವೀರಾರೆಡ್ಡಿ ಮತ್ತಿತರರು ಹಾಜರಿದ್ದರು.
BIG NEWS: ‘ಭ್ರಷ್ಟಾಚಾರ ಕಾಯ್ದೆ’ ವ್ಯಾಪ್ತಿಗೆ ‘ಸಹಕಾರಿ ನೌಕರ’ರು ಬರುತ್ತಾರೆ: ಹೈಕೋರ್ಟ್ ಮಹತ್ವದ ತೀರ್ಪು
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion