ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಅವರು ಭಾನುವಾರ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಸ್ತಾವಿತ ಸುರಂಗ ಮಾರ್ಗದ ರ‍್ಯಾಂಪ್ ಜಾಗವನ್ನು ಪರಿಶೀಲಿಸಿದ್ದು, ಈ ಯೋಜನೆಯಿಂದ ಲಾಲ್‌ಬಾಗ್‌ನ ಯಾವುದೇ ಭಾಗದ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುತ್ತಾರೆ.
ಪರಿಶೀಲನೆ ವೇಳೆ, ಸೂರ್ಯ ಅವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ಗೆ ಈ ಯೋಜನೆಯಿಂದ 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾದ ಲಾಲ್‌ಬಾಗ್ ಬಂಡೆಗಳ ರಚನೆಯ ಮೇಲೆ ಉಂಟಾಗುವ ಭೂವೈಜ್ಞಾನಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನಿರ್ದೇಶನ ನೀಡಿದರು.
ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ರಚಿಸಲಾದ, ಬಿ-ಸ್ಮೈಲ್ (B-SMILE) ಅಧಿಕಾರಿಗಳು, ಪರಿಸರ ಪರಿಣಾಮ ಮೌಲ್ಯಮಾಪನ (EIA) ಕೈಗೊಳ್ಳದ ಕಾರಣ ಮತ್ತು ಸುರಂಗ ರ‍್ಯಾಂಪ್‌ಗಾಗಿ, ಉದ್ಯಾನವನದ ಭಾಗವನ್ನು ಗುರುತಿಸುವ ಮೊದಲು ಸಾರ್ವಜನಿಕರು ಮತ್ತು ಲಾಲ್‌ಬಾಗ್‌ನ ನಿಯಮಿತ ವಾಕಿಂಗ್ ಮಾಡುವವರೊಂದಿಗೆ ಸಮಾಲೋಚನೆ ನಡೆಸದೇ ಇರುವುದರ ಬಗ್ಗೆ ಸಂಸದ ಸೂರ್ಯ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, “ಕರ್ನಾಟಕ ಸರ್ಕಾರವು ಸುರಂಗ ಮಾರ್ಗದ ನಿರ್ಗಮನ ರ‍್ಯಾಂಪ್ ಮಾಡಲು ಬೆಂಗಳೂರಿನ ಅತ್ಯಂತ ಅಮೂಲ್ಯ ಸ್ಥಳವಾದ ಲಾಲ್‌ಬಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಯೋಜನೆಯು ನಮ್ಮ ನಗರದ ಪರಂಪರೆಯ ಭಾಗವಾಗಿರುವ, 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪುರಾತತ್ವ ಅದ್ಭುತವಾದ ಲಾಲ್‌ಬಾಗ್ ಬಂಡೆಗಳಿಗೆ ದೊಡ್ಡ ಅಪಾಯವನ್ನು ತಂದೊಡ್ಡುತ್ತದೆ. ರ‍್ಯಾಂಪ್‌ನಲ್ಲಿ ಮಾಲ್‌ಗಳು ಮತ್ತು ತಿನಿಸುಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಸಹ ಸರ್ಕಾರ ಬಯಸಿದ್ದು, ಲಾಲ್‌ಬಾಗ್ ನಮ್ಮೆಲ್ಲರಿಗೂ ಸೇರಿದ್ದು, ಅದು ನಗರಕ್ಕೆ ಸೇರಿದ್ದು. ಬೆಂಗಳೂರಿನ ಜನರು ನಗರಕ್ಕೆ ವಿನಾಶವನ್ನು ತರುವ ಈ ವಿವೇಚನಾ ರಹಿತ ಯೋಜನೆಯ ಭಾಗವಾಗಿ ಲಾಲ್‌ಬಾಗ್‌ನ ಯಾವುದೇ ಭಾಗವನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದಿದ್ದಾರೆ.
ಯಾವುದೇ ಪರಿಸರ ಪರಿಣಾಮ ಮೌಲ್ಯಮಾಪನ (EIA) ಅಥವಾ ಸುರಂಗವು ಲಾಲ್‌ಬಾಗ್‌ನ ಪ್ರಾಚೀನ ಬಂಡೆಯ ರಚನೆಯ ಯಾವುದೇ ಭಾಗಕ್ಕೆ ಪರಿಣಾಮ ಬೀರುತ್ತದೆಯೇ ಎಂಬುದರ ಕುರಿತು ಯಾವುದೇ ಭೂವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಸುರಂಗ ಮಾರ್ಗ ಯೋಜನೆಯನ್ನು ಆತುರದಿಂದ ಮಾಡಲಾಗುತ್ತಿರವುದು ಅಕ್ಷಮ್ಯ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಿಗೆ ಆದ್ಯತೆ ನೀಡುವ ಬದಲು, ಕರ್ನಾಟಕ ಸರ್ಕಾರವು ಈ ಅನಗತ್ಯ ಸುರಂಗ ಮಾರ್ಗ ಯೋಜನೆಯನ್ನು ಜನರ ಮೇಲೆ ಹೇರುತ್ತಿದೆ ಎಂದು ಕೂಡ ಈ ಸಂದರ್ಭದಲ್ಲಿ ಹೇಳಿದರು.
ಜಿಎಸ್‌ಐಗೆ ನೀಡಿದ ತಮ್ಮ ಮನವಿಯಲ್ಲಿ ಸೂರ್ಯ ಅವರು, ಕರ್ನಾಟಕ ಸರ್ಕಾರದ ಸುರಂಗ ಮಾರ್ಗ ಯೋಜನೆಯನ್ನು ಲಾಲ್‌ಬಾಗ್ ಬಂಡೆಗಳ ರಚನೆಯ ಮೇಲೆ ಉಂಟಾಗಬಹುದಾದ ಸಂಭಾವ್ಯ ಪರಿಣಾಮದ ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಮುಂದಕ್ಕೆ ತಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂತಹ ಯೋಜನೆಗಳಿಗೆ, ಪರಿಸರ ಪರಿಣಾಮ ಮೌಲ್ಯಮಾಪನ (EIA) ಮಾಡುವುದು ಭಾರತ ಸರ್ಕಾರದಿಂದ ಕಡ್ಡಾಯವಾಗಿದೆ. ಆದರೆ, ಬಿ-ಸ್ಮೈಲ್ ಈ ಯೋಜನೆಗೆ ಇಐಎಯಿಂದ ವಿನಾಯಿತಿ ಇದೆ ಎಂದು ಹೇಳಿಕೊಳ್ಳುತ್ತಿರುವುದು ಸತ್ಯಕದ್ಕೆ ದೂರ. ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಸುರಂಗ ದುರಂತದ ನಂತರ, ಯಾವುದೇ ಸುರಂಗವನ್ನು ಕೊರೆಯುವ ಮೊದಲು ಭೂಕಂಪನ ಮತ್ತು ಭೂವೈಜ್ಞಾನಿಕ ಪರಿಣಾಮದ ಸಂಪೂರ್ಣ ಅಧ್ಯಯನವನ್ನು ಕೈಗೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ನಿರ್ಣಯವಾಗಿದೆ.
ಯಾವುದೇ ಹಾನಿಯಾಗುವ ಮೊದಲು ಭೂವೈಜ್ಞಾನಿಕ ಪರಿಣಾಮ ಅಧ್ಯಯನವನ್ನು ಸಿದ್ಧಪಡಿಸಿ ಆದಷ್ಟು ಬೇಗನೆ ಸಾರ್ವಜನಿಕಗೊಳಿಸಬೇಕು ಎಂದು ತಿಳಿಸಿದ ಸಂಸದರು, ಈ ಪ್ರದೇಶದಲ್ಲಿ ಸುರಂಗ ಕೊರೆಯುವ ಚಟುವಟಿಕೆಗಳು ಭೂ ಅಸ್ಥಿರತೆ, ಬಿರುಕುಗಳು ಮತ್ತು ಜಲವಿಜ್ಞಾನದ ಅಡಚಣೆಗಳಿಗೆ ಕಾರಣವಾಗಬಹುದು, ಇದು ಲಾಲ್‌ಬಾಗ್‌ನ ಪರಿಸರ ವ್ಯವಸ್ಥೆ ಮತ್ತು ಪಕ್ಕದ ನಗರ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ಸೂರ್ಯ ರವರು ಪತ್ರದಲ್ಲಿ ಬರೆದಿದ್ದಾರೆ.