ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸದ್ದು ಕೇಳಿ ಬರುತ್ತಿದೆ. ಹಾಲಿ ಸಚಿವರಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲು ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಹೊಸಬರಿಗೆ ಅವಕಾಶವನ್ನು ನೀಡೋದಕ್ಕೆ ಲೀಸ್ಟ್ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರು ಕೂಡ ಇರುವುದಾಗಿ ಹೇಳಲಾಗುತ್ತಿದೆ. ಆ ಮೂಲಕ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಶಾಸಕರಾಗಿ ಪ್ರಸ್ತುತ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಬೇಳೂರು ಮಂತ್ರಿಯಾಗುತ್ತಾರೆ ಎನ್ನುವ ವದಂತಿ ದಟ್ಟವಾಗಿ ಹರಡಿದೆ. ಸದಾ ಮಂತ್ರಿಮಂಡಲ ವಿಸ್ತರಣೆಯಾಗಬೇಕು ಎನ್ನುವ ಸಂದರ್ಭದಲ್ಲಿ ಗೋಪಾಲಕೃಷ್ಣ ಬೇಳೂರು ಹೆಸರು ಮುನ್ನೆಲೆಗೆ ಬರುತ್ತದೆ. ಮತ್ತೆ ಹಾಗೆಯೇ ಮಾಯವಾಗಿ ಬಿಡುತ್ತದೆ. ಆದರೇ ಈ ಬಾರಿ ಗೋಪಾಲಕೃಷ್ಣ ಬೇಳೂರು ಮಂತ್ರಿಯಾಗಿಯೇ ತೀರುತ್ತಾರೆ ಎನ್ನುವ ಮಾತ ದಟ್ಟವಾಗಿ ಹರಡಿದೆ. ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದಂತ ಗೋಪಾಲಕೃಷ್ಣ ಬೇಳೂರು, ಈ ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಶಾಸಕರಾಗಿ ತಮ್ಮ ವರ್ಚಸ್ಸನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ.
ಸಾಗರಕ್ಕೆ ಮಂತ್ರಿಗಿರಿ ಇತಿಹಾಸ
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ಞಾವಂತರ ಸಂಖ್ಯೆ ಹೆಚ್ಚಿದ್ದು ಹೋರಾಟದ ಕುದಿಯುವ ನೆಲ ಎಂದೇ ಹೆಸರಾಗಿದೆ. ಸಮಾಜವಾದಿ ಮತ್ತು ರೈತ ಚಳುವಳಿಗಳಿಗೆ ಸಾಗರ ದಿಕ್ಕು ತೋರಿಸಿದ ಪ್ರದೇಶ. ಇಷ್ಟೆಲ್ಲ ಇದ್ದರೂ ಕಾಗೋಡು ತಿಮ್ಮಪ್ಪ ತಮ್ಮ ಕಾರ್ಯತತ್ಪರತೆಯ ಹೋರಾಟದ ಮೂಲಕವೇ ಹಲವು ಬಾರೀ ಈ ಕ್ಷೇತ್ರವನ್ನು ಸ್ಪರ್ಧಿಸಿ, ಗೆಲುವು ಸಾಧಿಸಿ ಮಂತ್ರಿಯಾದವರು. ಅವರನ್ನು ಹೊರತುಪಡಿಸಿದರೇ ಸಾಗರದವರೇ ಆಗಿದ್ದ ಕೆ.ಹೆಚ್ ಶ್ರೀನಿವಾಸ್ ಎರಡು ಬಾರಿ ಶಾಸಕರಾಗಿದ್ದರು. ಒಂದು ಬಾರಿ ಸಾಗರದಿಂದ ಗೆಲುವು ಸಾಧಿಸಿ ಮತ್ತೊಂದು ಬಾರಿ ಶಿವಮೊಗ್ಗದಿಂದ ಗೆದ್ದು ಶಿವಮೊಗ್ಗದ ಮೂಲಕ ಸಚಿವರಾದರು. ಅದನ್ನು ಬಿಟ್ಟರೇ ಸಾಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರಾರೂ ಮಂತ್ರಿಯಾಗಲಿಲ್ಲ. ಮೂರನೇ ಬಾರಿ ಗೆಲುವ ಸಾಧಿಸಿರುವ ಗೋಪಾಲಕೃಷ್ಣ ಬೇಳೂರು ಸಚಿವರಾದರೇ ಮಾವನವರ ದಾಖಲೆಯನ್ನು ಮುರಿದಂತೆ ಆಗುತ್ತದೆ.
ಗೋಪಾಲಕೃಷ್ಣ ಬೇಳೂರು ಸಚಿವರಾಗುವುದು ಹೇಗೆ?
ಈಡಿಗ ಸಮುದಾಯದ ಕೋಟಾದಲ್ಲಿ ಈಗಾಗಲೇ ಜಿಲ್ಲೆಯಿಂದ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾರೆ. ಬಂಗಾರಪ್ಪನವರ ಪುತ್ರರೂ ಆಗಿರುವುದು ಇವರಿಗೆ ಆನೆ ಬಲ. ಅಷ್ಟು ಸುಲಭವಾಗಿ ಮಧು ಬಂಗಾರಪ್ಪನವರ ಮಂತ್ರಿಗಿರಿಯನ್ನು ತಪ್ಪಿಸಿ, ಗೋಪಾಲಕೃಷ್ಣ ಬೇಳೂರುಗೆ ಸ್ಥಾನಕೊಡುವುದು ಸುಲಭವಲ್ಲ. ಆದರೇ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಗೋಪಾಲಕೃಷ್ಣ ಬೇಳೂರು ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ. ಸರ್ಕಾರದ ಹಲವು ಯೋಜನೆಗಳನ್ನು ಸಾಗರಕ್ಕೆ ತರುವಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲದರ ಜೊತೆಯಲ್ಲಿ ಜನರ ಜೊತೆಯಲ್ಲಿ ಇವರು ಬೆರೆಯುವ ಆಲೋಚನಾ ಕ್ರಮ ಮತ್ತು ತಂತ್ರಗಾರಿಕೆಯನ್ನು ಎಲ್ಲ ಪಕ್ಷದ ಕಾರ್ಯಕರ್ತರು ಹೊರಗೆ ವಿರೋಧಿಸಿದರೂ ಅಂತರಾಳದಲ್ಲಿ ಒಪ್ಪಿಕೊಳ್ಳುವುದಂತೂ ಸತ್ಯ.
ಹೀಗೂ ಆಗಬಹುದು
16ಕ್ಕೂ ಹೆಚ್ಚು ಮಂತ್ರಿಗಳನ್ನು ಸಚಿವ ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಮಣೆಹಾಕುವ ಆಲೋಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಈ ಸಂದರ್ಭದಲ್ಲಿ ಬೇಳೂರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚು ಕಂಡುಬರುತ್ತಿದೆ. ಒತ್ತಾಡ ಹೆಚ್ಚಾಗಿ ಮಧು ಬಂಗಾರಪ್ಪನವರನ್ನು ಉಳಿಸಿಕೊಂಡು, ಬೇಳೂರಿಗೂ ಸಚಿವ ಸ್ಥಾನ ನೀಡಬಹುದಾಗಿದೆ. ಏಕೆಂದರೇ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಹತೋಟಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬರುವ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಉತ್ಸುಕದಲ್ಲಿದ್ದು, ರಣತಂತ್ರವನ್ನು ಹೆಣೆಯುತ್ತಿದ್ದಾರೆ. ಸಂಘಟನೆಯ ದೃಷ್ಠಿಯಿಂದ ಅವರ ಗರಡಿಯಲ್ಲಿರುವ ಗೋಪಾಲಕೃಷ್ಣ ಬೇಳೂರನ್ನೇ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡರೂ ಏನೂ ಆಶ್ಚರ್ಯ ಪಡಬೇಕಾಗಿಲ್ಲ.
ಒಟ್ಟಾರೆ ಗೋಪಾಲಕೃಷ್ಣ ಬೇಳೂರಿಗೆ ಸಚಿವ ಸ್ಥಾನ ಲಭ್ಯವಾಗುವ ಎಲ್ಲಾ ಸೂಚನೆಗಳು ಹತ್ತಿರವಾದಂತೆ ಕಾಣುತ್ತಿದೆ. ಸಚಿವ ಸಂಪುಟ ವಿಸ್ತರಣೆಯು ಆರಂಭವಾದರೇ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವರಾಗೋದು ಗ್ಯಾರಂಟಿ ಎಂಬುದು ಸಿದ್ದು ಸಂಪುಟದ ಸದಸ್ಯರ ಮಾತಾಗಿದೆ. ಅದು ನಿಜವಾಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು