ಶಿವಮೊಗ್ಗ: ರೈತರು ಕೃಷಿಯಲ್ಲಿನ ಸವಾಲು ಎದುರಿಸಲು ಬೆಳೆ ವೈವಿಧ್ಯತೆ ಮತ್ತು ಮಿಶ್ರತಳಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಗ್ಲೋಬಲ್ ಗ್ರೀನ್ ಗ್ರೋಥ್ ಸಂಸ್ಥೆಯ ಮುಖ್ಯಸ್ಥ ಡಾ.ಚಂದ್ರಶೇಖರ್ ಎಂ.ಬೀರದಾರ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಮಂಚಾಲೆ ಗ್ರಾಮದಲ್ಲಿ ಪ್ರಗತಿಪರ ಕೃಷಿಕ ಪ್ರಕಾಶ್ ರಾವ್ ಅವರ ಕಾಡುತೋಟದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಶಿರಸಿಯ ಕೆವಿಕೆ, ವಿಶ್ವಂ ಒಆರ್.ಜಿ ಫೌಂಡೇಷನ್ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ʼಕೃಷಿ-ಖುಷಿʼ ನೈಸರ್ಗಿಕ ಕೃಷಿ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಅನೇಕ ಸವಾಲುಗಳಿದ್ದು ಕಾಡುಪ್ರಾಣಿಗಳ ಉಪಟಳ, ಹವಾಮಾನ ವೈಪರಿತ್ಯ, ಮಾರುಕಟ್ಟೆ ಸಮಸ್ಯೆ, ಬೆಲೆ ಏರಿಳಿತ, ಮುಂತಾದ ಅನೇಕ ತೊಂದರೆಗಳನ್ನು ಎದುರಿಸಲು ನಾವೇ ಪರಿಹಾರ ಕಂಡುಕೊಂಡು ವೈಜ್ನಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಮುನ್ನುಗಬೇಕಾಗಿದೆ ಎಂದು ಹೇಳಿದರು.
ರಾಸಾಯನಿಕ ಕೃಷಿಯನ್ನು ಬದಿಗಿಟ್ಟು ಸಾವಯವ ಕೃಷಿಯ ಜೊತೆಗೆ ನೈಸರ್ಗಿಕ ಪದ್ಧತಿಗಳನ್ನು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಮ್ಮ ಪಾರಂಪರಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಮೂಲ ಆಹಾರ ಪದ್ಧತಿಗಳನ್ನು ತಿಳಿದುಕೊಂಡು ಅದನ್ನು ಅಳವಡಿಸಿಕೊಳ್ಳಬೇಕು. ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ರಾಜ್ಯದ ವಿವಿಧ ಭಾಗಗಳ ಪ್ರಗತಿಪರ ಕೃಷಿಕರನ್ನು ಒಗ್ಗೂಡಿಸಿ, ಒಟ್ಟಾಗಿ ವಿಚಾರವಿನಿಮಯ ಮಾಡಿಕೊಳ್ಳುವುದುರ ಮೂಲಕ ಕೃಷಿಯಲ್ಲಿ ಹೊಸಹೊಸದಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮ ಸಂಯೋಜಕರಾದ ಪ್ರಗತಿಪರ ಕೃಷಿಕ ಪ್ರಕಾಶ್ ಮಂಚಾಲೆ ಮಾತನಾಡಿ ಈಗಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ ನೋಡಿದರೆ, ಕೃಷಿಯನ್ನು ನಡೆಸುವುದೂ ಕಷ್ಟ. ಬಿಡುವುದೂ ಕಷ್ಟ. ಆಹಾರ ಬೆಳೆಯುವ ರೈತರಿಗೆ ಕಬ್ಬೀಣದ ಕಡಲೆಯಾಗಿ ಪರಿಣಮಿಸಿದೆ. ಸಾವಯವ ಕೃಷಿ ಮಾಡುವುದರ ಮೊದಲು ಅದರ ಹಿನ್ನೆಲೆ ಮತ್ತು ಮುಂದಿನ ಪರಿಣಾಮಗಳ ಬಗ್ಗೆ ಅರಿತಿರಬೇಕಾಗುತ್ತದೆ. ಸಾವಯವ ಕೃಷಿಯ ಬಗೆಗಿನ ಮಾಹಿತಿಯನ್ನು ನೀವು ಇಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಬಹುದಾಗಿದೆ. ಇದರ ಬಗೆಗಿನ ಒಳ್ಳೆಯ ಅಂಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಇದರಿಂದ ನೈಸರ್ಗಿಕ ಕೃಷಿಕರಿಗೆ ಒಂದು ಉತ್ತೇಜನ ನೀಡಿದಂತಾಗುತ್ತದೆ. ಎಷ್ಟು ಜಾಗದಲ್ಲಿ ಕೃಷಿ ಮಾಡುತ್ತೇವೆ ಎಂಬುದಕ್ಕಿಂತ ಸಣ್ಣ ಸಣ್ಣ ಕೃಷಿಕರೂ ಸಹಾ ಜಾಗದ ಸದ್ಬಳಕೆ ಮಾಡಿ ಹೇಗೆ ಕೃಷಿ ಮಾಡುತ್ತಾರೆ ಎಂಬುದು ಇಲ್ಲಿ ಪ್ರಮುಖವಾದ ಅಂಶ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 50ಕ್ಕೂ ಹೆಚ್ಚು ಆಸಕ್ತ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಕಾಶ್ ಮಂಚಾಲೆಯವರ “ಕಾಡು-ಮಾದರಿ” ತೋಟದಲ್ಲಿ ಶಿಬಿರಾರ್ಥಿಗಳು ನೈಸರ್ಗಿಕ ಕೃಷಿ ಪದ್ಧತಿಯ ಕುರಿತು ಅಧ್ಯಯನ ನಡೆಸಿದರು. ಪ್ರಕೃತಿದತ್ತವಾಗಿ ಪ್ರಾಣಿಪಕ್ಷಿಗಳ ಕಾಟದ ನಿಯಂತ್ರಣ, ಕಳೆ ನಿರ್ವಹಣೆಯ ಕುರಿತು ಚರ್ಚಿಸಲಾಯಿತು.
ನಂತರ ಕೃಷಿ ವಿಜ್ನಾನಿಗಳ ಜೊತೆ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು. ಪ್ರತೀ 100 ಎಕರೆ ಕೃಷಿ ಜಮೀನಿಗೆ ಕನಿಷ್ಟ 5ರಿಂದ 10 ಎಕರೆ ಕಾಡು ಬೆಳೆಸಿ ಕಾಡುಪ್ರಾಣಿಗಳಿಗೆ ಆಹಾರವನ್ನು ಒದಗಿಸಬೇಕು. ಬೆಳೆ ಸಂರಕ್ಷಣೆಗೆ ಆಂದೋಲನ ರೂಪಿಸಬೇಕು ಎಂದು ಚರ್ಚಿಸಲಾಯಿತು.
ನೈಸರ್ಗಿಕ ಆಹಾರ ಪದ್ದತಿಯ ಊಟ ಸವಿದ ಶಿಬಿರಾರ್ಥಿಗಳು
ನೈಸರ್ಗಿಕ ಆಹಾರ ಪದ್ಧತಿಯನ್ನು ಅನುಸರಿಸಿ ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಚಟ್ನಿ,ತಂಬುಳಿ,ಸೊಪ್ಪಿನ ಚಿತ್ರಾನ್ನ, ಬಾಳೆದಿಂಡಿನ ಕೋಸಂಬರಿ, ಮೊಸರು, ಮೆಣಸಿನಕಾಳಿನ ಸಾರು, ತೊಡದೇವು, ಕಪ್ಪಕ್ಕಿ ಪಾಯಸ, ಚೀನಿಕಾಯಿಯ ಸಿಹಿ, ಮಿಡಿ ಮತ್ತು ನಿಂಬೆ ಉಪ್ಪಿನಕಾಯಿ, ಮೆಂತೆಕಾಳಿನ ಮೊಳಕೆ ಕೋಸಂಬರಿ ಮುಂತಾದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಶಿಬಿರಾರ್ಥಿಗಳು ಸವಿದರು.
ಈ ಕಾರ್ಯಕ್ರಮದಲ್ಲಿ ಸಿರಸಿ ಕೆವಿಕೆಯ ವಿಜ್ನಾನಿ ರೂಪಾ ಪಾಟೀಲ್, ಡಾ.ನಾಗಭೂಷಣ್, ನಾರಾಯಣ ಉಪಾಧ್ಯಾಯ, ಡಾ.ರಮೇಶ್, ಡಾ.ಜಗನ್ನಾಥ್, ಒಆರ್ ಜಿ ಫೌಂಡೇಷನ್ ನ ದಿಲೀಪ್ ಮತ್ತಿತರರು ಹಾಜರಿದ್ದರು.
BIG NEWS: ರಾಜ್ಯದ KPSC ಪರೀಕ್ಷೆ, ಮೌಲ್ಯಮಾಪನಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ‘OOD’ ಕುರಿತು ಸರ್ಕಾರ ಮಹತ್ವದ ಆದೇಶ
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ