ಬೆಂಗಳೂರು: ನವದೆಹಲಿಯಲ್ಲಿರುವ ಆಫ್ಘನ್ ರಾಯಭಾರ ಕಚೇರಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಿಂದ ಪತ್ರಕರ್ತೆಯರನ್ನು ಹೊರಗಿಟ್ಟಿರುವ ಕ್ರಮವನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಅವರು, ಭಾರತದ ನೆಲದಲ್ಲಿ ನಡೆದಿರುವ ಈ ಉದ್ದೇಶಪೂರ್ವಕ ಲಿಂಗ ತಾರತಮ್ಯದ ಕೃತ್ಯವು ಅತ್ಯಂತ ಆತಂಕಕಾರಿಯಾಗಿದೆ. ಇದು ಸಮಾನತೆ ಮತ್ತು ತಾರತಮ್ಯವನ್ನು ನಿಷೇಧಿಸುವ ಭಾರತದ ಸಂವಿಧಾನದ ವಿಧಿ 14 ಮತ್ತು 15 ರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಪತ್ರಿಕಾಗೋಷ್ಠಿಯಿಂದ ದೂರ ಉಳಿದಿದ್ದರೂ, ಭಾರತದೊಳಗೆ ನಡೆಯುವ ಯಾವುದೇ ರಾಜತಾಂತ್ರಿಕ ಕಾರ್ಯಕ್ರಮವು ಇಂತಹ ಲಿಂಗ ತಾರತಮ್ಯವನ್ನು ಮಾನ್ಯ ಮಾಡದಂತೆ ಅಥವಾ ಸಹಿಸದಂತೆ ನೋಡಿಕೊಳ್ಳುವ ನೈತಿಕ ಮತ್ತು ಸಾಂವಿಧಾನಿಕ ಜವಾಬ್ದಾರಿ ಭಾರತ ಸರ್ಕಾರಕ್ಕಿದೆ ಎಂದು ಸಂಘವು ನಂಬುತ್ತದೆ ಎಂದು ಹೇಳಿದ್ದಾರೆ.
ಅದೇ ರೀತಿ, ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಬದಲು ಕೇವಲ ಪುರುಷ ವರದಿಗಾರರನ್ನು ಕಳುಹಿಸಲು ನಿರ್ಧರಿಸಿದ ಕೆಲವು ಮಾಧ್ಯಮ ಸಂಸ್ಥೆಗಳ ನಡೆ ಆತಂಕಕಾರಿಯಾಗಿದೆ. ಈ ಮೌನ ಸಮ್ಮತಿಯು ಸುದ್ದಿಮನೆಗಳಲ್ಲಿನ ವೃತ್ತಿಪರ ನೈತಿಕತೆ, ಲಿಂಗ ಸಂವೇದನೆ ಮತ್ತು ಸಾಮೂಹಿಕ ಪ್ರಜ್ಞೆಯ ಗಂಭೀರ ಕುಸಿತವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಪತ್ರಕರ್ತೆಯರ ಸಂಘದ ಆಗ್ರಹಗಳು ಹೀಗಿವೆ:
ಈ ತಾರತಮ್ಯದ ಕೃತ್ಯವನ್ನು ಭಾರತ ಸರ್ಕಾರವು ಕಟುವಾಗಿ ಖಂಡಿಸಿ ಹೇಳಿಕೆ ನೀಡಬೇಕು. ಭಾರತದಲ್ಲಿನ ಯಾವುದೇ ವಿದೇಶಿ ರಾಯಭಾರ ಕಚೇರಿಯ ಕಾರ್ಯಕ್ರಮವು ಲಿಂಗ ಸಮಾನತೆಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ಮಹಿಳಾ ಪತ್ರಕರ್ತೆಯರಿಗೆ ಪ್ರವೇಶ ನಿಷೇಧಿಸಿದ ಸ್ಥಳಗಳಲ್ಲಿ ವರದಿ ಮಾಡದಿರುವ ಕುರಿತು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಿಕಾ ಸಮಿತಿಗಳು ಖಂಡಿಸಿ, ಸೂಕ್ತಕ್ರಮಕ್ಕೆ ಆಗ್ರಹಿಸಿದ್ದಾರೆ.
ಯಾರು ಮಾಡಿದರೂ, ಲಿಂಗ ತಾರತಮ್ಯಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ. ರಾಜತಾಂತ್ರಿಕ ನೆಪದಲ್ಲಿ ಇದಕ್ಕೆ ಅವಕಾಶ ನೀಡುವುದರಿಂದ ಸಮಾನತೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಹಿಳೆಯರ ಘನತೆಯ ಕುರಿತ ಭಾರತದ ಬದ್ಧತೆಗೆ ಧಕ್ಕೆಯಾಗುತ್ತದೆ. ಸ್ಥಳ, ಧ್ವನಿ ಅಥವಾ ಮಾನ್ಯತೆ ನಿರಾಕರಿಸಲ್ಪಟ್ಟಿರುವ ದೇಶದ ಎಲ್ಲಾ ಮಹಿಳಾ ಪತ್ರಕರ್ತೆಯರೊಂದಿಗೆ ಕರ್ನಾಟಕ ಪತ್ರಕರ್ತೆಯರ ಸಂಘವು ಗಟ್ಟಿಯಾಗಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ನಾವು ನಾಗರಿಕ ಸಮಾಜ, ಪತ್ರಕರ್ತರ ಸಂಘಗಳು, ಮಹಿಳಾ ಹಕ್ಕುಗಳ ಗುಂಪುಗಳು ಮತ್ತು ದೇಶದ ಎಲ್ಲಾ ಪತ್ರಿಕಾ ಸಂಸ್ಥೆಗಳಿಗೆ ಈ ನಡೆಯನ್ನು ಪ್ರತಿಭಟಿಸಲು, ಹೊಣೆಗಾರಿಕೆಯನ್ನು ಪ್ರಶ್ನಿಸಲು ಮತ್ತು ಇನ್ನು ಮುಂದೆ ಭಾರತದಲ್ಲಿ ಯಾವುದೇ ಮಾಧ್ಯಮ ಕಾರ್ಯಕ್ರಮವು ಮಹಿಳೆಯರನ್ನು ದ್ವಿತೀಯ ದರ್ಜೆಯ ಭಾಗಿದಾರರಂತೆ ನಡೆಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಬೆಂಗಳೂರಿನ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಮನವಿ ಮಾಡಿದ್ದಾರೆ.
CRIME NEWS: ದೇಶಾದ್ಯಂತ ಹಲವರ ಬ್ಯಾಂಕ್ ಖಾತೆಗಳಿಂದ 150 ಕೋಟಿ ಎಗರಿಸಿದ್ದ ಸೈಬರ್ ವಂಚಕ ಅರೆಸ್ಟ್
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ