ಶಿವಮೊಗ್ಗ : ಗಣತಿಗೆ ಬರುವ ಶಿಕ್ಷಕರನ್ನು ನಿಮ್ಮ ಮನೆ ಅತಿಥಿಗಳಂತೆ ನೋಡಿ. ಸರ್ಕಾರ ಗಣತಿಗೆ ನಿಯೋಜಿಸಿರುವ ಶಿಕ್ಷಕರನ್ನು ಬೈಯಬೇಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಹತ್ತರ ಉದ್ದೇಶದಿಂದ ಗಣತಿ ನಡೆಸುತ್ತಿದೆ. ತಾಲ್ಲೂಕಿನಲ್ಲಿ ಈತನಕ ಶೇ. 98ರಷ್ಟು ಗಣತಿ ಕಾರ್ಯ ಮುಗಿದಿದೆ. ಕೆಲವು ಕಡೆಗಳಲ್ಲಿ ಮಾಹಿತಿ ಸಂಗ್ರಹಕ್ಕೆ ಬಂದ ಶಿಕ್ಷಕರನ್ನು ಕೇವಲವಾಗಿ ನಡೆಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಾಧ್ಯವಾದರೆ ಮಾಹಿತಿ ಕೊಡಿ. ಇಲ್ಲವಾದಲ್ಲಿ ತಿರಸ್ಕಾರ ಮಾಡಿ.. ತಾಲ್ಲೂಕಿನಲ್ಲಿ ಶಿಕ್ಷಕರು ಗಣತಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಕ್ರೀಡಾಸ್ಪೂರ್ತಿಯಿಂದ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ನೆಹರೂ ಮೈದಾನದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತವಾದ ವೇದಿಕೆ, ಶೌಚಾಲಯ, ಡ್ರೆಸ್ಸಿಂಗ್ ರೂಮ್ ನಿರ್ಮಾಣಕ್ಕೆ 40 ಲಕ್ಷ ರೂ. ಮೈದಾನದ ಸುತ್ತಲೂ ಫೆನ್ಸಿಂಗ್ ನಿರ್ಮಾಣಕ್ಕೆ 20 ಲಕ್ಷ ರೂ. ಮೀಸಲಿರಿಸಿದ್ದು, ಅ. 18ಕ್ಕೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಹೊಸನಗರದ ಕ್ರೀಡಾಂಗಣ ಅಭಿವೃದ್ದಿಗೆ ಸಹ ಅಗತ್ಯ ನೆರವು ಒದಗಿಸಲಾಗಿದೆ. ಮಕ್ಕಳು ತಾಲ್ಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ಜಿಲ್ಲಾ, ರಾಜ್ಯ, ರಾಷ್ಟ ಹಾಗೂ ಅಂತರಾಷ್ಟಿಯ ಮಟ್ಟದಲ್ಲಿ ಸಾಧನೆ ಮಾಡಲು ಹುರುಪು ತುಂಬಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಸಹ ಮುಖ್ಯವಾಗಿದೆ. ಮಕ್ಕಳಿಗೆ ಓದಿನಲ್ಲಿ ಶ್ರದ್ದೆ ಇರಬೇಕು. ಅದೇ ರೀತಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಇರಬೇಕು. ಶಾಸಕರು ನೆಹರೂ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ನಗರಸಭೆ ಸದಸ್ಯೆ ಮಧುಮಾಲತಿ, ಸೈಯದ್ ಜಾಕೀರ್, ಸಾಗರ ಬಿಇಓ ಪರಶುರಾಮಪ್ಪ ಈ., ಭೂಮೇಶ್, ರಮೇಶ್, ಶಿವಪ್ರಕಾಶ್ ಬಿ.ಎಲ್., ಚಂದ್ರಪ್ಪ, ಪಾರ್ವತಮ್ಮ, ರಾಜಶೇಖರ ಶೆಟ್ಟಿ, ಡಾ. ಅನ್ನಪೂರ್ಣ, ಮೂರ್ತಿ ಎಂ.ವೈ, ದಿನೇಶ್, ಯಶೋಧರ ಇತರರು ಉಪಸ್ಥಿತರಿದ್ದರು.
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’