ನವದೆಹಲಿ: ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಬಗ್ಗೆ ಚರ್ಚಿಸುವ ಭದ್ರತಾ ಕ್ಯಾಬಿನೆಟ್ ಸಭೆಯನ್ನು ವಿರಾಮಗೊಳಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಅವರ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ
ಗಾಜಾ ಶಾಂತಿ ಯೋಜನೆಗೆ ಅಭಿನಂದನೆ ಸಲ್ಲಿಸಲು ಪ್ರಧಾನಿ ಮೋದಿ ತಮ್ಮ ಇಸ್ರೇಲಿ ಪ್ರಧಾನಿಯೊಂದಿಗೆ ಮಾತನಾಡಿದರು. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಯಾವುದೇ ರೂಪದ ಭಯೋತ್ಪಾದನೆಯನ್ನು ವಿಶ್ವದ ಎಲ್ಲಿಯೂ ಸ್ವೀಕಾರಾರ್ಹವಲ್ಲ ಎಂದು ಪುನರುಚ್ಚರಿಸಿದ್ದೇನೆ ಎಂದು ಹೇಳಿದ್ದಾರೆ.
ಇಸ್ರೇಲ್ ಪಿಎಂಒ ಹೇಳಿಕೆಯ ಪ್ರಕಾರ, “ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಏರ್ಪಟ್ಟ ಒಪ್ಪಂದಕ್ಕಾಗಿ ಪ್ರಧಾನಿ ಮೋದಿ ಪ್ರಧಾನಿ ನೆತನ್ಯಾಹು ಅವರನ್ನು ಅಭಿನಂದಿಸಿದರು” ಎಂದು ತಿಳಿಸಿದೆ.
ನೆತನ್ಯಾಹು ಅವರು ಇಸ್ರೇಲ್ ಗೆ ನೀಡಿದ ಬೆಂಬಲಕ್ಕಾಗಿ ಮೋದಿಗೆ ಧನ್ಯವಾದ ಅರ್ಪಿಸಿದರು ಮತ್ತು ಇಬ್ಬರೂ ನಿಕಟ ಸಹಕಾರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಂಡರು.
ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಮಾತುಕತೆ
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿ, ಗಾಜಾಕ್ಕಾಗಿ ಯುಎಸ್ ಮಧ್ಯಸ್ಥಿಕೆಯಲ್ಲಿ ಶಾಂತಿ ಯೋಜನೆಯ ಮೊದಲ ಹಂತದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಅವರು ಮತ್ತು ಟ್ರಂಪ್ ಅವರು ವ್ಯಾಪಾರ ಮಾತುಕತೆಗಳಲ್ಲಿ ಸಾಧಿಸಿದ “ಉತ್ತಮ ಪ್ರಗತಿಯನ್ನು” ಸಹ ಪರಿಶೀಲಿಸಿದ್ದಾರೆ ಎಂದು ಹೇಳಿದರು.