ಬೆಂಗಳೂರು: ಮಹಿಳೆಯರ ಆರೋಗ್ಯದ ದೃಷ್ಟಿಯಿಂದ “ಋತುಚಕ್ರ ರಜೆ” ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದ್ದು, ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ.
ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಖಾಸಗಿ ಕಂಪೆನಿ, ಕೈಗಾರಿಕಾ ವಲಯದಲ್ಲಿ ಕಾರನಿರ್ವಹಿಸುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ರಜೆ ನೀಡು ವ ‘ಋತು ಚಕ್ರ ರಜೆ ನೀತಿ -2025’ ಜಾರಿಗೆ ತರುವ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.
ಇಂದು ಬೆಳಗ್ಗೆ 11.30 ಗಂಟೆಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಸರ್ಕಾರಿ, ಖಾಸಗಿ ಕಂಪನಿಯಲ್ಲಿ ಸೇರಿ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಋತು ಚಕ್ರದ ರಜೆ ನೀಡಲು ತೀರ್ಮಾನಿಸುವ ಸಾಧ್ಯತೆಯಿದೆ.
ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಮುಟ್ಟಿನ ರಜೆ ನೀತಿ ಈಗಾಗಲೇ ಇದೆ. ಆ ರಾಜ್ಯಗಳು ಅನುಸರಿಸುತ್ತಿರುವ ನೀತಿಗಳೂ ಸೇರಿದಂತೆ ಮಹಿಳಾಸ್ನೇಹಿ ನಿಯಮ ರೂಪಿಸಲು ಅಗತ್ಯವಾದ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರದ ಎಲ್ಲ ಇಲಾಖೆಗಳು ಹಾಗೂ ಖಾಸಗಿ ಕಂಪನಿ, ಕೈಗಾರಿಕೆಗಳ ಜತೆಗೂ ಸರ್ಕಾರ ಮಾತುಕತೆ ನಡೆಸಿದೆ. ರಜೆ ನೀಡುವುದರಿಂದ ಗಾರ್ಮೆಂಟ್ಸ್ ಸೇರಿದಂತೆ ಮಹಿಳಾ ಅವಲಂಬಿತ ಉದ್ಯಮಗಳ ಮೇಲಾಗುವ ಸಾಧಕ-ಬಾಧಕಗಳ ಕುರಿತು ಪರಿಶೀಲಿಸಲಾಗಿದೆ. ಎಲ್ಲರ ಅಭಿಪ್ರಾಯ ಕಲೆಹಾಕಿ, ಸಿದ್ಧತೆ ಪೂರ್ಣಗೊಂಡ ನಂತರ ಆರ್ಥಿಕ ಇಲಾಖೆಯ ಒಪ್ಪಿಗೆಗೆ ಕಳುಹಿಸಿ ನೀತಿ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ.