ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬ ಹಾಗೂ ಸಿದ್ದೇಶ್ವರ ದರ್ಶನೋತ್ಸವಕ್ಕೆ ಸಿದ್ಧತೆ ನಡೆದಿದ್ದು, ನಾಳೆ ದೇವಾಲಯದ ಬಾಗಿಲು ತೆರೆಯಲಿದೆ. ಸಾರ್ವಜನಿಕರಿಗೆ ಶುಕ್ರವಾರದಿಂದ (ಅ. 10) ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶ್ರೀ ಹಾಸನಾಂಬ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಸದರಿ ದೇವಾಲಯದಲ್ಲಿ ಪ್ರತೀ ವರ್ಷ ಶ್ರೀ ಹಾಸನಾಂಬ ದೇವಿಯ ಜಾತ್ರೋತ್ಸವ ಕಾರ್ಯಕ್ರಮವು ಅಭೂತಪೂರ್ವವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಡೇಟ್ ಫಿಕ್ಸ್ ಆಗಿದೆ. ಅಕ್ಟೋಬರ್ 9 ರಂದು ಬಾಗಿಲು ಓಪನ್ ಆಗಲಿದ್ದು, ಅಕ್ಟೋಬರ್ 23ರಂದು ಬಾಗಿಲು ಮುಚ್ಚಲಾಗುವುದು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58ರಡಿಯಲ್ಲಿ ದೇವಸ್ಥಾನದ ರೂಢಿ, ಸಂಪ್ರದಾಯ ಮತ್ತು ಆಚರಣೆಯಂತೆ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ವಸ್ತ್ರ ಸಂಹಿತೆಯನ್ನು ಪಾಲಿಸುವುದು ಸೂಕ್ತವಾಗಿದ್ದು, ಈ ಬಗ್ಗೆ ದಿನಾಂಕ:19.09.2025 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ನಿರ್ಣಯವಾಗಿರುತ್ತದೆ.
ಆದ್ದರಿಂದ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರಂತೆ ಹಾಸನ ಜಿಲ್ಲೆ ಹಾಸನ ಟೌನ್ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಪುರುಷರು ಪಂಚೆ, ದೋತಿಯಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರದಂತಹ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದು. ಯಾವುದೇ ರೀತಿಯ ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ, ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುವುದಿಲ್ಲ.