ಗುಜರಾತ್: ಗುಜರಾತ್ನ ಸೋಮನಾಥ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 80 ವರ್ಷಗಳಷ್ಟು ಹಳೆಯದಾದ ವಸತಿ ಕಟ್ಟಡವೊಂದು ಕುಸಿದು ಬಿದ್ದಿದೆ.
ವೆರಾವಲ್ ನಗರದಲ್ಲಿ ಸಂಭವಿಸಿದ ಕುಸಿತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ
ಮುಂಜಾನೆ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆಯಲು ಪುರಸಭೆ ಸಿಬ್ಬಂದಿ, ಅಗ್ನಿಶಾಮಕ ದಳದವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ಮಣ್ಣಿನ ರಾಶಿ ಕುಸಿದು ಜಾರ್ಖಂಡ್ ನ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು ಮತ್ತು ಒಬ್ಬರು ಗಾಯಗೊಂಡಿದ್ದರು. ಮಡಿವಾಲಾದ ಸಿದ್ಧಾರ್ಥ್ ಕಾಲೋನಿಯಲ್ಲಿ ಕಂಬದ ಅಡಿಪಾಯದ ಮೇಲೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಮಾಣದ ಸಮಯದಲ್ಲಿ, ಮೂವರು ಕಾರ್ಮಿಕರ ಮೇಲೆ ಮಣ್ಣು ಕುಸಿದು ಬಿದ್ದು, ಅವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಮೃತರನ್ನು ರಾಜಾ ಉದ್ದೀನ್ ಅನ್ಸಾರಿ (33) ಮತ್ತು ಲಾಲ್ ಮದನ್ (32) ಎಂದು ಗುರುತಿಸಲಾಗಿದೆ. ಸೈಫುಲ್ಲಾ (28) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ