ಶಿವಮೊಗ್ಗ: ಅರಣ್ಯ ಭೂಮಿ ಒತ್ತುವರಿ ತೆರವು ಅಂದ್ರೆ ಒತ್ತುವರಿಗೊಂಡಿರುವಂತ ಭೂಮಿಯನ್ನು ಮೂಲ ಅರಣ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ನೆಡೆಸಬೇಕಾದ ಕಾರ್ಯಾಚರಣೆಯಾಗಿದೆ. ಇದನ್ನೇ ಕರ್ನಾಟಕ ಅರಣ್ಯ ಭೂಮಿ ಅಧಿನಿಯಮಗಳಲ್ಲೂ ತಿಳಿಸಲಾಗಿದೆ. ಇದೇ ರೀತಿಯಲ್ಲೇ ಒತ್ತುವರಿ ತೆರವು ಕೂಡ ಮಾಡಬೇಕು. ಆದರೇ ಈ ಯಾವುದನ್ನು ಮಾಡದಂತ ಸಾಗರದ ಆರಣ್ಯ ಇಲಾಖೆಯ ಅಧಿಕಾರಿಗಳು, ಇಂದು ಬಂದ ಪುಟ್ಟ, ಬೋರ್ಡ್ ನೆಟ್ಟು ಹೋದ ಪುಟ್ಟ ಎನ್ನುವಂತೆ ಅರಣ್ಯ ಭೂಮಿ ಒತ್ತುವರಿ ಕಾರ್ಯಾಚರಣೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿ
ಸಾಗರ ವಿಭಾಗದ ಆನಂದಪುರಂ ಹೋಬಳಿಯ ಮಲಂದೂರು ಗ್ರಾಮದ ಸರ್ವೆ ನಂಬರ್.157ರಲ್ಲಿ ಆರ್.ಎಂ ಷಣ್ಣುಖ ಬಿನ್ ಮಂಜಪ್ಪ ಗೌಡ ಎಂಬುವರು ಮಲಂದೂರು ಮೀಸಲು ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ದೂರು ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಂತ ಅರಣ್ಯ ಇಲಾಖೆಯ ಅಧಿಕಾರಿಗಳು ಅದು ಮಲಂದೂರು ಮೀಸಲು ಅರಣ್ಯ ಪ್ರದೇಶದ ಅರಣ್ಯ ಭೂಮಿ ಎಂಬುದನ್ನು ದಾಖಲೆಗಳ ಮೂಲಕ ಖಚಿತ ಪಡಿಸಿಕೊಂಡಿದ್ದಾರೆ. ಅದರಂತೆ ತೆರವು ಕೂಡ ಮಾಡಿದ್ದಾರೆ. ಆದರೇ ಅದೇ ಹಲವು ಅನುಮಾನಗಳಿಗೆ, ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದೆ.
ಬೋರ್ಡ್ ಹಾಕಿ, ಪೋಸ್ ಕೊಟ್ಟುಬಂದ ಅರಣ್ಯಾಧಿಕಾರಿಗಳು
ಒತ್ತುವರಿದಾರರಿಗೆ ಕಾನೂನಿನಡಿ ತೆರವಿಗೆ ನೋಟಿಸ್ ಕೂಡ ನೀಡಿದ್ದಾರೆ. ಅದರಂತೆ ಇಂದು 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ತೆರವು ಮಾಡಿರೋದಾಗಿ ಅಡಿಕೆ ಗಿಡದ ನಡುವೆ ಬೋರ್ಡ್ ಹಾಕಿ ಪೋಸ್ ಕೊಟ್ಟು ಬಂದಿದ್ದಾರೆ. ಇದು ಯಾವ ರೀತಿಯ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಸ್ವಾಮಿ? ಎಲ್ಲಾ ಒತ್ತುವರಿಯನ್ನು ಹೀಗೆ ಮಾಡುತ್ತೀರಾ ಎಂಬುದಾಗಿ ಸಾರ್ವಜನಿಕರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒತ್ತುವರಿ ತೆರವು ಅಂದ್ರೆ ಕಾಡು ಗಿಡಗಳನ್ನು ಹೊರತುಪಡಿಸಿ, ಉಳಿದೆಲ್ಲವನ್ನು ನಾಶಪಡಿಸುವುದು. ಆ ಬಳಿಕ ಮೂಲ ಅರಣ್ಯ ಸ್ವರೂಪಕ್ಕೆ ಒತ್ತುವರಿ ಭೂಮಿಯನ್ನು ತರುವುದಾಗಿದೆ. ಆದರೇ ಇಂದು ಆ ಕೆಲಸವನ್ನೇ ಅರಣ್ಯಾಧಿಕಾರಿಗಳು ಮಾಡಿಲ್ಲ. ಬದಲಾಗಿ ಅಡಿಕೆ ಗಿಡಗಳ ನಡುವೆ “ಇದು ಅರಣ್ಯ ಇಲಾಖೆಯ ಭೂಮಿ” ಎಂಬುದಾಗಿ ಬೋರ್ಡ್ ಹಾಕಿ ಬಂದಿದ್ದೀರಲ್ಲ ಇದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಒತ್ತುವರಿ ತೆರವಿಗೆ ಹೋಗಿದ್ದು ಬರೋಬ್ಬರಿ 150ಕ್ಕೂ ಹೆಚ್ಚು ಸಿಬ್ಬಂದಿ
ಸಾಗರ ವಿಭಾಗದ 10 ರೇಂಜ್ ಸಿಬ್ಬಂದಿಗಳು 6 ಎಕರೆ 24 ಗುಂಟೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡೋದಕ್ಕೆ 10 ರಿಂದ 20 ವಾಹನಗಳಲ್ಲಿ ಮಲಂದೂರು ಗ್ರಾಮದ ಸರ್ವೆ ನಂಬರ್.157ಕ್ಕೆ ತೆರಳಿದ್ದಾರೆ. ಇಷ್ಟೊಂದು ಸಿಬ್ಬಂದಿಗಳು ಹೋದರೂ ಬಂದ ಪುಟ್ಟ, ಹೋದ ಪುಟ್ಟ ಎನ್ನುವಂತೆ ಒಂದೇ ಒಂದು ಬೋರ್ಡ್ ನೆಟ್ಟು ವಾಪಾಸ್ ಆಗಿದ್ದು ಅಚ್ಚರಿ, ಅನುಮಾನಕ್ಕೆ ಕಾರಣವಾಗಿದೆ.
ಅಂದಹಾಗೇ ಒತ್ತುವರಿದಾರರು ವಕೀಲರು ಎನ್ನುವ ಕಾರಣಕ್ಕೆ ಅರಣ್ಯಾಧಿಕಾರಿಗಳು ಈ ನಡೆಯನ್ನು ತೋರಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಬಲಾಢ್ಯರಿಗೆ ಒಂದು ನ್ಯಾಯ, ಬೇರೆಯವರಿಗೆ ಮತ್ತೊಂದು ನ್ಯಾಯವೇ ಎಂಬುದಾಗಿ ಜನರು ಸಾಗರದ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ತಂತಿ ಬೇಲಿ ಕೂಡ ಮುಟ್ಟದೇ ಅದರ ಪಕ್ಕದಲ್ಲೇ ಟ್ರಂಚ್
ಅರಣ್ಯ ಭೂಮಿ ಒತ್ತುವರಿ ತೆರವು ವೇಳೆಯಲ್ಲಿ ಮಾನವ ನಿರ್ಮಿತದ ಯಾವುದೇ ಇದ್ದರೂ ಮುಲಾಜಿಲ್ಲದೇ ಕಿತ್ತು ಹಾಕಲಾಗುತ್ತದೆ. ಅದು ಮನೆ, ಬೆಳೆಯಾದರೂ ಸರಿಯೇ. ಈ ಹಿಂದಿನ ಅರಣ್ಯ ಭೂಮಿ ಒತ್ತುವರಿಯಲ್ಲಿ ಹಾಗೆಯೇ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಆದರೇ ಮಲಂದೂರು ಗ್ರಾಮ ಸರ್ವೆ ನಂಬರ್.157ರಲ್ಲಿ 6 ಎಕರೆ 24 ಗುಂಟೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದರೂ ಅಡಿಕೆ ಗಿಡಗಳಿಗೆ ಹಾಕಿದ್ದಂತ ತಂತಿ ಬೇಲಿಯನ್ನು ಸಹ ಕಿತ್ತು ಹಾಕದೇ ಹಾಗೆಯೇ ಬಿಡಲಾಗಿದೆ. ಅದರ ಪಕ್ಕದಲ್ಲೇ ನಾಮಕಾವಸ್ಥೆಗೆ ಎನ್ನುವಂತೆ ಟ್ರಂಚ್ ಹೊಡೆದು ಬಂದಿದ್ದಾರೆ. ತಂತಿ ಬೇಲಿ ಕಿತ್ತು ಹಾಕಿ ವಶ ಪಡಿಸಿಕೊಳ್ಳಬೇಕಿತ್ತು. ಅದನ್ನು ಏಕೆ ಮಾಡಿಲ್ಲ ಅರಣ್ಯಾಧಿಕಾರಿಗಳು ಎಂಬುದಾಗಿ ಸಾರ್ವಜನಿಕರ ಪ್ರಶ್ನೆಯಾಗಿದೆ.
ಸಂಪರ್ಕಕ್ಕೆ ಸಿಗದ ಸಿಸಿಎಫ್, ಸಾಗರ ಡಿಎಫ್ಓ ಡಿ.ಮೋಹನ್ ಕುಮಾರ್ ಹೇಳೋದೇನು?
ಈ ಬಗ್ಗೆ ವಿಚಾರಿಸಲು ಶಿವಮೊಗ್ಗ ಸಿಸಿಎಫ್ ಹನುಮಂತರಾಯಪ್ಪ ಸಾಹೇಬ್ರಿಗೆ ಕರೆ ಮಾಡಿದ್ರೆ ಅವರ ನಂಬರ್ ಸ್ವಿಚ್ ಆಫ್ ಎಂಬುದಾಗಿ ಬಂದಿತ್ತು. ಹೀಗಾಗಿ ಡಿಎಫ್ಓ ಡಿ.ಮೋಹನ್ ಕುಮಾರ್ ಅವರಿಗೆ ವಿಚಾರಿಸಿದಾಗ ಹೇಳಿದ್ದು ಈ ಕೆಳಗಿನಂತೆ..
ಇಂದು ಮಲಂದೂರು ಗ್ರಾಮದ ಸರ್ವೆ ನಂಬರ್.157ರಲ್ಲಿ 6 ಎಕರೆ 24 ಗುಂಟೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಫಸಲಿಗೆ ಬಂದಿದ್ದಂತ ಅಡಿಕೆ ಬೆಳೆಯಾಗಿದ್ದರಿಂದ ಹಾಗೆಯೇ ಬಿಟ್ಟು ಬರಲಾಗಿದೆ. ಆ ಬೆಳೆಯನ್ನು ಟೆಂಡರ್ ಮೂಲಕ ಮಾರಾಟ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳ ನಿರ್ದೇಶದಂತೆ ಕ್ರಮ ವಹಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಈ ಹಿಂದಿನ ಒತ್ತುವರಿ ತೆರವು ಹೀಗೆ ನಡೆಸಿದ್ರ ಡಿಎಫ್ಓ ಸಾಹೇಬ್ರೆ.?
ಈ ಹಿಂದೆ ಸಾಗರದ ವಿಭಾಗದ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅರಣ್ಯ ಭೂಮಿಯಲ್ಲಿ ನಿರ್ಮಿಸಿದ್ದಂತ ಮನೆಯನ್ನು ನಾಶ ಪಡಿಸಲಾಗಿದೆ. ಬೆಳೆಗೆ ಬಂದು ನಿಂತಿದ್ದಂತ ಫಸಲನ್ನು ಕತ್ತರಿಸಿ ಹಾಕಿ ಒತ್ತುವರಿ ತೆರವು ಮಾಡಲಾಗಿದೆ. ಆದರೇ ಮಲಂದೂರು ಗ್ರಾಮದ ಸರ್ವೆ ನಂಬರ್.157ರಲ್ಲಿ ಆ ಒಂದೇ ಒಂದು ಕೆಲಸವನ್ನು ಮಾಡಿಲ್ಲ. ಕನಿಷ್ಠ ತಂತಿ ಬೇಲಿಯನ್ನು ಕಿತ್ತು ಹಾಕದೇ ಅದರ ಬಳಿಯಲ್ಲೇ ಟ್ರಂಚ್ ಹೊಡೆದು ನಾಮಕಾವಸ್ಥೆಗೆ ಬೋರ್ಡ್ ನೆಟ್ಟು ಬರಲಾಗಿದೆ.
ಸಂಪೂರ್ಣ ತೆರವಿನ ಮಾಹಿತಿ ಹಂಚಿಕೊಂಡ ಅರಣ್ಯ ಸಚಿವರ ಕಚೇರಿ
ಸಾಗರ ವಿಭಾಗ ವ್ಯಾಪ್ತಿಯ ಮಲಂದೂರು ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ಬಂದ ಪುಟ್ಟ, ಬೋರ್ಡ್ ನೆಟ್ಟು ಹೋದ ಪುಟ್ಟ ಎನ್ನುವಂತೆ ಅರಣ್ಯ ಭೂಮಿಯನ್ನು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಸಾಗರದ ಅರಣ್ಯಾಧಿಕಾರಿಗಳ ನಡೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಅರಣ್ಯ ಇಲಾಖೆಯ ಈ ನಡೆ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಚೇರಿಯನ್ನು ಸಂಪರ್ಕಿಸಿ ಕೇಳಲಾಯಿತು.
ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಕಚೇರಿಯು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡದಂತೆ ಅರಣ್ಯಾಧಿಕಾರಿಗಳು ಅರಣ್ಯ ಭೂಮಿ ಎಂದು ನಾಮಫಲಕ ನೆಟ್ಟು, ಟ್ರಂಚ್ ಹೊಡೆದು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಭೂಮಿಯಲ್ಲಿದ್ದಂತ ಫಸಲು ತೆರವುಗೊಳಿಸಿ, ಮೂಲ ಅರಣ್ಯದ ಸ್ವರೂಪಕ್ಕೆ ಕೊಂಡೊಯ್ಯುವ ಕೆಲಸವನ್ನು ಇಲಾಖೆ ಮಾಡಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಒಟ್ಟಾರೆಯಾಗಿ ಸಾಗರದ ಅರಣ್ಯ ಇಲಾಖೆಯವರ ನಡೆ ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಲಾಢ್ಯರ ಮುಂದೆ ಒಂದು ರೀತಿ, ಜನ ಸಾಮಾನ್ಯರ ಮುಂದೆ ಮಗದೊಂದು ರೀತಿಯಂತೆ ಕಂಡು ಬಂದಿದೆ. ಅದೇನೇ ಆದರೂ ಮಲಂದೂರು ಗ್ರಾಮದ ಸರ್ವೆ ನಂಬರ್.175ರಲ್ಲಿ ಅರಣ್ಯ ಭೂಮಿ ಎಂಬುದಾಗಿ ಬೋರ್ಡ್ ನೆಟ್ಟು ಬಂದರೆ ಸಾಲದು, ಕರ್ನಾಟಕ ಅರಣ್ಯ ಭೂಮಿ ಅಧಿನಿಯಮದಂತೆ ಅರಣ್ಯದ ಮೂಲ ಸ್ವರೂಪಕ್ಕೆ ಮರಳಿಸುವಂತ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡಲಿ ಎಂಬುದು ಜನರ ಆಗ್ರಹವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ದಕ್ಷಿಣ ಕನ್ನಡ ಆನೆ ಕಾರ್ಯಪಡೆಗೆ 48 ಸಿಬ್ಬಂದಿ, ತುಮಕೂರು ಜಿಲ್ಲೆ ಚಿರತೆ ಕಾರ್ಯಪಡೆಗೆ 59 ಸಿಬ್ಬಂದಿ ನಿಯೋಜನೆ