ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೆರಳಿದಂತ ವೇಳೆಯಲ್ಲಿ ಬೆಂಗಳೂರಲ್ಲಿ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟು ಇದೆ ಎಂದು ಕೇಳಬಾರದು. ಬೆಂಗಳೂರಲ್ಲಿ ಆ ರೀತಿಯಾಗಿ ಯಾವುದೇ ಗಣತಿದಾರರು ಕೇಳಬಾರದು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಮೌಖಿಕವಾಗಿ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದಂತ ಅವರು, ಯಾರೇ ಏನೇ ಆಕ್ಷೇಪಣೆ ಮಾಡಿದರೂ ಸಮೀಕ್ಷೆ ನಡೆಯುತ್ತದೆ. ಇಷ್ಟವಿದ್ದ ಪ್ರಶ್ನೆಗೆ ಉತ್ತರಿಸಿ, ಇಲ್ಲದಿದ್ದರೆ ಬೇಡ ಎಂದು ನ್ಯಾಯಾಲಯವೇ ಹೇಳಿದೆ. ಸಮೀಕ್ಷೆಗೆ ವಿರೋಧ ಮಾಡುವುದು ಸರಿಯಲ್ಲ ಎಂದರು.
“ಈ ಹಿಂದಿನ ಗಣತಿ ಸರಿಯಿಲ್ಲ ಎಂದರು. ಅದಕ್ಕೆ ಹೊಸದಾಗಿ ಗಣತಿ ಮಾಡಲಾಗುತ್ತಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
ಎರಡು ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆಯೇ ಎಂದು ಕೇಳಿದಾಗ, “ಇದರ ಬಗ್ಗೆ ಸಂಬಂಧ ಪಟ್ಟ ಆಯೋಗದವರು ಆಲೋಚನೆ ಮಾಡುತ್ತಾರೆ” ಎಂದು ಉತ್ತರಿಸಿದರು.
ವೈಯಕ್ತಿಕ ಮಾಹಿತಿಗಳನ್ನು ಕೇಳಲು ಹೋಗಬೇಡಿ
“ಬೆಂಗಳೂರಿನ ನಾಗರೀಕರ ಬಳಿ ಕೋಳಿ, ಕುರಿ, ಒಡವೆ, ವಾಷಿಂಗ್ ಮೆಷಿನ್, ಫ್ರಿಜ್ಡ್ ಹಾಗೂ ಇತರೇ ವೈಯಕ್ತಿಕ ಮಾಹಿತಿಗಳನ್ನ ಕೇಳಲು ಹೋಗಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರುಗಳು ಏನು ಮಾಡುತ್ತಾರೋ ಗೊತ್ತಿಲ್ಲ” ಎಂದರು.