ಬೆಂಗಳೂರು : “ಎಲ್ಲಾ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಕರಿಗೆ ಮನವಿ ಮಾಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಚಾಲನೆ ನೀಡಿದ ನಂತರ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದ್ದು, ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ನಿಮ್ಮ ಮಾಹಿತಿ ಒದಗಿಸಿಕೊಡಬೇಕು. ಈ ಸಮೀಕ್ಷೆಗೆ ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂದು ಕೇಳಿದಾಗ, “ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆ” ಎಂದರು.
ಕೆಲವು ವೈಯಕ್ತಿಕ ಮಾಹಿತಿ ಪ್ರಶ್ನೆಗಳಿವೆ ಎಂದು ಕೇಳಿದಾಗ, “ಈ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಈ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮತೆಯಿಂದ ಮಾಡಬೇಕು ಎಂದು ಸಮೀಕ್ಷೆದಾರರಿಗೂ ಹೇಳಿದ್ದೇನೆ” ಎಂದರು.
ಅನೇಕರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದಾರೆ ಎಂದು ಕೇಳಿದಾಗ, “ತಿಳುವಳಿಕೆ ನೀಡಬೇಕಾದದ್ದು ನಮ್ಮ ಕರ್ತವ್ಯ. ನಾವದನ್ನು ಮಾಡುತ್ತೇವೆ” ಎಂದರು
ಸರ್ವರ್ ಸಮಸ್ಯೆ ಇದೆ ಎಂದು ಕೇಳಿದಾಗ, “ಇರಲಿ, ಅದನ್ನೆಲ್ಲಾ ಅವರು ಸರಿಪಡಿಸುತ್ತಾರೆ. ಅದು ಅವರ ಜವಾಬ್ದಾರಿ. ಆನ್ ಲೈನ್ ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿಯೂ ನೀವು ಮಾಹಿತಿ ನೀಡಬೇಕು” ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ದೊಡ್ಡವರ ಬಗ್ಗೆ ನಾವೇನು ಹೇಳೋಣ?” ಎಂದು ತಿರುಗೇಟು ನೀಡಿದರು.
ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಈಗ 15-20 ಸಾವಿರ ಕೋಟಿ ನಷ್ಯವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು” ಎಂದು ತಿಳಿಸಿದರು.
BIG NEWS: ರಾಜ್ಯದಲ್ಲೊಂದು ಪ್ರಸಿದ್ಧ ಅಂಗಡಿ ಮಾಲೀಕರಿಗೆ ಬ್ಲಾಕ್ ಮೇಲ್: ಇಬ್ಬರು ಆರೋಪಿಗಳು ಅರೆಸ್ಟ್
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?