ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಡೇಟ್ ಫಿಕ್ಸ್ ಆಗಿದೆ. ಅಕ್ಟೋಬರ್ 9 ರಂದು ಬಾಗಿಲು ಓಪನ್ ಆಗಲಿದ್ದು, ಅಕ್ಟೋಬರ್ 23ರಂದು ಬಾಗಿಲು ಮುಚ್ಚಲಾಗುವುದು.
ಹಾಸನ ನಗರದಲ್ಲಿ ಸ್ವಾಗತ ಕಮಾನು, ಲೈಟಿಂಗ್ಸ್, ಎಲ್ಇಡಿ ಅಳವಡಿಕೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಅನುಕೂಲ ಕಲ್ಪಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಪೂರ್ವ ತಯಾರಿಯೊಂದಿಗೆ ಭರದಿಂದ ಸಿದ್ಧತೆ ಸಾಗಿದೆ.
ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನೂಕುನುಗ್ಗಲು ಆಗದಂತೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ. ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ 300 ರೂ. ಹಾಗೂ 1000 ರೂ. ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದು ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ. ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ಅವಕಾಶವಿದ್ದು, ದಿನದಲ್ಲಿ ಎರಡು ಗಂಟೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.