ಬೆಂಗಳೂರು: ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ,ಉತ್ತರ ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಶೇ.95 ರಷ್ಟು ಪ್ರವಾಹ ಸಂಭವಿಸಿದೆ. ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು,ಹುಬ್ಬಳ್ಳಿ ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಕೇಂದ್ರದ ಪ್ರವಾಹಪರಿಹಾರ ಕೊಡಿಸಲಿ
ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪ್ರವಾಹ ಪರಿಹಾರವನ್ನು ಕೇಂದ್ರದಿಂದ ಕೊಡಿಸುವುದಾಗಿ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದರೆ 2023ರಲ್ಲಿ ರಾಜ್ಯಕ್ಕೆ ಬರಗಾಲ ಬಂದಿದ್ದಾಗ, ಕೇಂದ್ರಸರ್ಕಾರದವರು ಬರಪರಿಹಾರ ನೀಡದೇ, ಸುಪ್ರೀಂಕೋರ್ಟ್ ನ ಬಳಿ ಧಾವಿಸಿ, ಪರಿಹಾರ ತೆಗೆದುಕೊಳ್ಳುವಂತಾಯಿತು. ಪ್ರಸ್ತುತ ಕುಮಾರಸ್ವಾಮಿಯವರು ಪರಿಹಾರ ಕೊಡಿಸುವುದಾದರೆ ಪ್ರಸ್ತಾವನೆಯನ್ನು ರಾಜ್ಯಸರ್ಕಾರ ಸಲ್ಲಿಸುವುದು ಎಂದರು.
ಕೇಂದ್ರಸರ್ಕಾರವೂ ಜಾತಿಗಣತಿಗೆ ಮುಂದಾಗಿದೆ
ಜಾತಿಸಮೀಕ್ಷೆಯಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ ಎಂದು ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಎಂದು ತಿಳಿಸಿರುವ ಬಗ್ಗೆ ಪ್ರತಿಕ್ರಯಿಸುತ್ತಾ, ಈ ಸಮೀಕ್ಷೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದಂತೆ ಅಸಮಾನತೆ ಹೋಗಲಾಡಿಸಲು ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಠವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವೂ ಜಾತಿಗಣಿತಿ ನಡೆಸಲು ಮುಂದಾಗಿದೆ ಎಂದರು.