ಶಿವಮೊಗ್ಗ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ)ಕ್ಕೆ ಸೇರಿಸಬಾರದು ಎಂದು ಆಗ್ರಹಿಸಿ ಸೊರಬ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಗಣಪತಿ ಮಾತನಾಡಿ, ಕುರುಬ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಸದೃಢವಾಗಿದೆ. ಆದ್ದರಿಂದ, ಸದೃಢ ಸಮುದಾಯವನ್ನು ಹಿಂದುಳಿದಿರುವ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸಂವಿಧಾನ ವಿರೋಧಿಯಾಗಿದೆ. ಅನ್ಯ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸರಿಯಲ್ಲ. ಈ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದುಳಿದ ವರ್ಗದ ಪ್ರವರ್ಗ-1ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೂಲಿ ಮುಂತಾದ ಸಮುದಾದವರಿಗೆ ನಕಲಿ ಎಸ್ಟಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಬೇಕು. ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪಡೆದಿದ್ದರೆ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪದವಿ ಹಾಗೂ ಉನ್ನತ ಪದವಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆರ್. ಪ್ರಶಾಂತ್, ಖಜಾಂಚಿ ಎಂ. ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ನಾಗೇನಹಳ್ಳಿ, ಪುರಸಭೆ ಸದಸ್ಯೆ ಜಯಲಕ್ಷ್ಮಿ ಪರಮೇಶ್ವರಪ್ಪ, ಪ್ರಮುಖರಾದ ಸಂಜೀವ ನೇರಲಗಿ, ಹನುಮಂತಪ್ಪ ಕಮನವಳ್ಳಿ, ಜಗದೀಶ್ ತೇವರತಪ್ಪ, ಹನುಮಂತಪ್ಪ ಆನವಟ್ಟಿ, ಮಾಲತೇಶ್ ವೃತ್ತಿಕೊಪ್ಪ, ಸೋಮಪ್ಪ ತೇವರತೆಪ್ಪ, ಹನುಮಂತಪ್ಪ ಇಡಗೋಡು, ಚನ್ನಬಸಪ್ಪ ಕೋಡಿಹಳ್ಳಿ, ಕೃಷ್ಣಮೂರ್ತಿ ಹುರಳಿಕೊಪ್ಪ, ಯೋಗೇಶ್ ವೃತ್ತಿಕೊಪ್ಪ, ಪ್ರಕಾಶ್ ಕಮನವಳ್ಳಿ ಸೇರಿದಂತೆ ಇತರರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ
ಕನ್ನಡ ನಾಡು, ನುಡಿ ಸೇವೆಗೆ ಸದಾ ಸಿದ್ಧ: ಸೊರಬ ಅಪ್ಪು ಸೇನೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಉಪ್ಪಳ್ಳಿ