ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿಸಿ ಆದೇಶಿಸಿದೆ. ಅಲ್ಲದೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕೆಲ ಷರತ್ತುಗಳನ್ನು ವಿಧಿಸಿ ಆದೇಶಿಸಿದೆ.
ಈ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ಅತಿಥಿ ಉಪನ್ಯಾಸಕರು ಸೇರಿದಂತೆ) ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಉಲ್ಲೇಖ-(1) ರಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ ಎಂದಿದ್ದಾರೆ.
2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಗಳಲ್ಲಿ ದಾಖಲಾಗಿದ್ದ ವಿವಿಧ ರಿಟ್ ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯದ ವಿವಿಧ ಪೀಠಗಳು ವಿವಿಧ ದಿನಾಂಕಗಳಂದು ನೀಡಲಾಗಿರುವ ಆದೇಶಗಳ ಹಿನ್ನೆಲೆಯಲ್ಲಿ ಕಾನೂನು ಅಭಿಪ್ರಾಯವನ್ನು ಕೋರಲಾಗಿತ್ತು ಎಂದು ಹೇಳಿದ್ದಾರೆ.
ಅದರಂತೆ, ಮಾನ್ಯ ಹೆಚ್ಚುವರಿ ಅಡೋಕೆಟ್ ಜನರಲ್ ರವರು ನೀಡಿರುವ ಕಾನೂನು ಅಭಿಪ್ರಾಯದಂತೆ, ರಿಟ್ ಅಪೀಲು ಸಂಖ್ಯೆ:1578/2024 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:09-09-2025 ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನೆಗಳಿಗೆ ಒಳಪಟ್ಟು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಹಾಗೂ ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ ಮಾನ್ಯ ನ್ಯಾಯಾಲಯದ ಮಧ್ಯಂತರ ಆದೇಶದನುಸಾರ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯು.ಜಿ.ಸಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಉಲ್ಲೇಖ-(9) ರ ಸರ್ಕಾರದ ಪತ್ರದಲ್ಲಿ ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ, ರಿಟ್ ಅಪೀಲು ಸಂಖ್ಯೆ:1578/2024 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:09-09-2025 ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನೆಗಳಿಗೆ ಒಳಪಟ್ಟು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನು ಆಯಾ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯನ್ವಯ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮಾತ್ರ ಆಯಾ ಕಾಲೇಜುಗಳಲ್ಲಿ ಕಾರ್ಯಭಾರದ ಲಭ್ಯತೆಗೆ ಅನುಗುಣವಾಗಿ ಮುಂದುವರೆಸುವಂತೆ ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಈ ಮೂಲಕ ಸೂಚಿಸಿದೆ.
ಸೂಚನೆಗಳು:
1. 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ, DOOF:02.08.2025 ಕರ್ತವ್ಯದಿಂದ ಬಿಡುಗಡೆ ಹೊಂದಿದ ಅತಿಥಿ ಉಪನ್ಯಾಸಕರು 2025-26ನೇ ಸಾಲಿಗೆ ಸಲ್ಲಿಸಿರುವ ಅರ್ಜಿಯಲ್ಲಿನ ಸೇವಾ ಅವಧಿ, ಮತ್ತಿತರೆ ವಿವರಗಳ ಆಧಾರದ ಮೇಲೆ ಸಿದ್ಧಪಡಿಸಿರುವ (Generate ಮಾಡಿರುವ) ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪಕಟಿಸಲಾಗಿದೆ.
2. ಸದರಿ ಪಟ್ಟಿಯನ್ವಯ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಸಾರವಾಗಿ ಅದೇ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನು 2025-263 ಸಾಲಿಗೆ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮಾತ್ರ ಮುಂದುವರೆಸುವುದು.
3. ಕಾಲೇಜುಗಳಲ್ಲಿ 2025-26ನೇ ಸಾಲಿನಲ್ಲಿ ಕಾರ್ಯಭಾರದ ಕೊರತೆಯಿಂದಾಗಿ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಸಾಧ್ಯವಿಲ್ಲದಿದ್ದಲ್ಲಿ ಮೇಲೆ ತಿಳಿಸಿದ ಪಟ್ಟಿಯಲ್ಲಿರುವ ಕೊನೆಯ ಅಭ್ಯರ್ಥಿಯನ್ನು ಕೈಬಿಡುವುದು.
4. ಪ್ರಾಂಶುಪಾಲರು ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಅದೇ ಕಾಲೇಜಿನಲ್ಲಿ ದಿನಾಂಕ:04.10.2025 ರೊಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವುದು ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ದಿನಾಂಕ:04.10.2025 ರೊಳಗಾಗಿ ಇಲಾಖೆಯ EMIS ತಂತ್ರಾಂಶದಲ್ಲಿ upload ಮಾಡುವುದು.
5. ಅತಿಥಿ ಉಪನ್ಯಾಸಕರು ದಿನಾಂಕ:04.10.2025 ರೊಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಹಾಗೂ ದಿನಾಂಕ:04.10.2025 ರೊಳಗಾಗಿ upload ಮಾಡದೆ ಇರುವ ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗುವುದು.
6. 2025-26ನೇ ಸಾಲಿನಲ್ಲಿ ಮುಂದುವರೆದಿರುವ ಅತಿಥಿ ಉಪನ್ಯಾಸಕರು 2025-26 ನೇ ಸಾಲಿಗೆ ಅರ್ಜಿಯಲ್ಲಿ ನೀಡಿರುವ ಮಾಹಿತಿ/ವಿವರಗಳನ್ವಯ ಅವರ ದಾಖಲಾತಿಗಳನ್ನು ಪ್ರಾಂಶುಪಾಲರು ಪರಿಶೀಲನೆ ಮಾಡಿಕೊಂಡು, ನಂತರ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವುದು. ಈ ಪರಿಶೀಲನೆಯಲ್ಲಿ ಯಾವುದಾದರೂ ಮಾಹಿತಿ/ವಿವರ ತಾಳೆಯಾಗದಿದ್ದಲ್ಲಿ ಅಂತಹವರನ್ನು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳದೆ, ಇಲಾಖೆಯ EMIS ತಂತ್ರಾಂಶದಲ್ಲಿ ‘reject ಎಂದು ನಮೂದಿಸಿ upload ಮಾಡುವುದು.
7. ಮೇಲೆ ತಿಳಿಸಿದಂತೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು 2025-26ನೇ ಸಾಲಿಗೆ ಮುಂದುವರೆಸಿದ ನಂತರವೂ ಕಾರ್ಯಭಾರ ಉಳಿಕೆಯಾದಲ್ಲಿ ಅಂತಹ ಉಳಿಕೆ ಕಾರ್ಯಭಾರಕ್ಕೆ ಮಾನ್ಯ ನ್ಯಾಯಾಲಯವು ರಿಟ್ ಅಪೀಲು ಸಂಖ್ಯೆ:1578/2024 ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:09-09-2025 ರಂದು ನೀಡಿರುವ ಮಧ್ಯಂತರ ಆದೇಶದನುಸಾರ ಮೆರಿಟ್ ಆಧರಿಸಿ Online Counselling ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ವರದಿ; ವಸಂತ ಬಿ ಈಶ್ವರಗೆರೆ…,, ಸಂಪಾದಕರು