ಬೆಂಗಳೂರು ಗ್ರಾಮಾಂತ: ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಿಂದ ಸಂಗ್ರಹಿಸಲಾದಂತ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಪ್ರತಿದಿನದಗ್ರಾಮದ ಬಾಶೆಟ್ಟಹಳ್ಳಿ ಕೆರೆಯಲ್ಲಿ ಸುರಿಯುತ್ತಿದ್ದಾರೆ. ಹೀಗೆ ತ್ಯಾಜ್ಯ ಸುರಿಯುತ್ತಿರುವಂತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬಾಶೆಟ್ಟಿಹಳ್ಳಿ ಜನಧ್ವನಿ ವೇದಿಕೆ ಆಗ್ರಹಿಸಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಬಾಶೆಟ್ಟಹಳ್ಳಿ ಜನಧ್ವನಿ ವೇದಿಕೆಯ ಮುಖಂಡರಾದಂತ ಸುದರ್ಶನ್, ಕೃಷ್ಣಮೂರ್ತಿ, ಸದಾನಂದ, ಜಿ.ಮುನಿರಾಜ್, ಟೈಲರ್ ಮೂರ್ತಿ, ರಾಜಶೇಖರ್, ಮಧು ಕುಮಾರ್ ಅವರು, ದಿನಂಪ್ರತಿ ಬಾಶೆಟ್ಟಹಳ್ಳಿಯ ಕೆರೆಗೆ ರಾಶಿಗಟ್ಟಲೇ ಕಸವನ್ನು ಪಟ್ಟಣ ಪಂಚಾಯ್ತಿಯಿಂದ ಸುರಿಯಲಾಗುತ್ತಿದೆ. ಅಲ್ಲದೇ ಸಮೀಪದಲ್ಲಿ ಇರುವಂತ ಕಾರ್ಖಾನೆಗಳಿಂದ ಕೆರೆಗೆ ರಸಾಯನಿಕ ಮಿಶ್ರಿತ ನೀರು ಹರಿದು ಬಂದು ಮತ್ತಷ್ಟು ಕಲುಷಿತಗೊಳ್ಳುತ್ತಿದೆ ಎಂಬುದಾಗಿ ಆಕ್ರೋಶ ಹೊರ ಹಾಕಿದ್ದಾರೆ.
ತ್ಯಾಜ್ಯ ನಿರ್ವಹಣೆ ಘಟಕವನ್ನು ನಿರ್ಮಿಸಿ, ಅಲ್ಲಿ ತ್ಯಾಜ್ಯ ಸಂಸ್ಕರಣೆಯನ್ನು ಮಾಡಬೇಕಿದ್ದಂತ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯ್ತಿ ಆ ಕೆಲಸವನ್ನೇ ಮಾಡುತ್ತಿಲ್ಲ. ಇದರ ಬದಲಾಗಿ ಕೆರೆಯ ಬಳಿಯಲ್ಲೇ ಪಟ್ಟಣ ಪಂಚಾಯ್ತಿಯಿಂದ ಕಸ ಸುರಿದು ರಾಶಿ ಮಾಡಲಾಗುತ್ತಿದೆ. ಈ ಕಸದಲ್ಲಿನ ಪೇಪರ್, ಕೆರೆಯ ಕಲುಷಿತ ನೀರು ಕುಡಿದು ಸುಮಾರು 8 ಜಾನುವಾರುಗಳು ಸಾವನ್ನಪ್ಪಿದ್ದಾವೆ. ಆ ಜಾನುವಾರು ಮಾಲೀಕರಿಗೂ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯ್ತಿಯಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಬಾಶೆಟ್ಟಹಳ್ಳಿ ಗ್ರಾಮದಲ್ಲಿನ ಕೆರೆಯು ದಿನೇ ದಿನೇ ತ್ಯಾಜ್ಯದಿಂದ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಚಕಾರವೆತ್ತದೇ ಇರುವುದು ವಿಪರ್ಯಾಸವೇ ಸರಿ. ಆದರೇ ಈ ರೀತಿ ಕಸವನ್ನು ತ್ಯಾಜ್ಯ ಸಂಸ್ಕರಣೆ ಮಾಡದೇ ಕೆರೆಯ ಪಕ್ಕದಲ್ಲೇ ಸುರಿಯುತ್ತಿರುವುದು ನಿಲ್ಲಿಸಬೇಕು. ಇದರಿಂದ ಪರಿಸರ ಕೂಡ ನಾಶವಾಗಲಿದೆ. ಕೆರೆಯ ಬಳಿಯಲ್ಲಿ ತ್ಯಾಜ್ಯ ಸುರಿಯುತ್ತಿರುವಂತ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬಾಶೆಟ್ಟಹಳ್ಳಿ ಜನಧ್ವನಿ ವೇದಿಕೆಯ ಮುಖಂಡರಾದ ಸುದರ್ಶನ್, ಕೃಷ್ಣಮೂರ್ತಿ, ಸದಾನಂದ, ಜಿ. ಮುನಿರಾಜ್, ಟೈಲರ್ ಮೂರ್ತಿ, ರಾಜಶೇಖರ್, ಮಧುಕುಮಾರ್ ಅಗ್ರಹಿಸಿದ್ದಾರೆ.