ಶಿವಮೊಗ್ಗ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ತಾಲ್ಲೂಕಿನ ಜನರು ಅಭಿವೃದ್ಧಿಗಾಗಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆ ಮಾಡಲಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಉಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ ಅವಧಿಯಲ್ಲಿ ಶಾಸಕರಾಗಿದ್ದಾಗ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಿ, ಮೂಗೂರು ಹಾಗೂ ಕಚವಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ವರದಾ ನದಿಗೆ ಅಡ್ಡಲಾಗಿ ಜೋಳದಗುಡ್ಡೆ ಸಮೀಪ ಬ್ಯಾರೇಜ್ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಹಲವು ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ಮಾಡುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿದ ಧೀಮಂತ ನಾಯಕನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು.
ತಾಲ್ಲೂಕಿನ ಅಭಿವೃದ್ಧಿಗೆ ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸುವ ನಾಯಕ ಕುಮಾರ್ ಬಂಗಾರಪ್ಪ. ಅವರ ಹೊಂದಿದ ಅಭಿವೃದ್ಧಿ ಚಿಂತನೆಗಳನ್ನು ಪಕ್ಷಾತೀತವಾಗಿ ಜನರು ಒಪ್ಪಿಕೊಳ್ಳುತ್ತಾರೆ. ಕ್ಷೇತ್ರದ ಮತದಾರರು 2028ರಲ್ಲಿ ಮತ್ತೊಮ್ಮೆ ಗೆಲ್ಲುಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.
ವಕೀಲ ಸೋಮಶೇಖರ್ ಬರದವಳ್ಳಿ ಮಾತನಾಡಿ, ಸೊರಬ ಕ್ಷೇತ್ರದ ಜನರು ಅಭಿವೃದ್ಧಿ ಹರಿಕಾರನನ್ನು ಸೋಲಿಸಿದ್ದಾರೆ. ಇವತ್ತು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿ ಸೋಲಿಸಿದ್ದು ತಪ್ಪಾಗಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರು ಎರಡೂವರೆ ವರ್ಷದಲ್ಲಿ ಕ್ಷೇತ್ರಕ್ಕೆ ನಿಮ್ಮ ಅಭಿವೃದ್ಧಿ ಏನು ಎನ್ನುವುದನ್ನು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದರು.
ಸಚಿವರು ದೊಡ್ಡ ದೊಡ್ಡ ಕಾಮಗಾರಿ ಮಾಡದಿರಲಿ, ಕನಿಷ್ಠ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಅತಿ ಹೆಚ್ಚು ಟ್ರೋಲ್ ಗೆ ಒಳಪಟ್ಟ ಅವರು, ಜನರ ಮಾಡುವ ಗೇಲಿತನದಿಂದ ಹೊರ ಬರುವುದಿಲ್ಲ. ಗೀತಾ ಶಿವರಾಜಕುಮಾರ್ ಅವರು ಚುನಾವಣೆಗೆ ಸರ್ಧಿಸುವುದಿಲ್ಲ ಎಂದು ಘೋಷಣೆ ಮಾಡುವ ಅವಶ್ಯಕತೆ ಇರಲಿಲ್ಲ. ಅವರು ಸ್ಪರ್ಧಿಸುವುದು,ಬಿಡುವುದು ಎರಡೂ ಒಂದೇ ಎಂದು ಟೀಕಿಸಿದರು.
ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್ ಮಾತನಾಡಿ, ಬಾಂಗ್ಲಾ ವಲಸೆಗರು ಮತ್ತು ವಕ್ಫ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಮತ್ತೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ತಂದರೆ ಸಾಲದು. ಗುಂಡಿಗಳನ್ನು ಮುಚ್ಚಿ ಜನರಿಗೆ ಮುಕ್ತವಾಗಿ ಓಡಾಡಲು ಮೊದಲು ಗ್ಯಾರಂಟಿ ನೀಡಲಿ. ಮುಂದಿನ ದಿನಗಳಲ್ಲಿ ಕುಮಾರ್ ಬಂಗಾರಪ್ಪ ಅಧಿಕಾರಕ್ಕೆ ಬಂದರೆ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಸೂರು ಕಲ್ಪಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಕುಮಾರ್ ಬಂಗಾರಪ್ಪ ಅವರ ಅಭಿಮಾನಿಗಳು ಪಟ್ಟಣದ ಆದಿಧೈವ ರಂಗನಾಥ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದಲ್ಲಿ ಜನ್ಮದಿನದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ,ಕುಮಾರ್ ಬಂಗಾರಪ್ಪ ಪರವಾಗಿ ಘೋಷಣೆ ಕೂಗಿದರು.
ನಿಮ್ಮ ಪ್ರೀತಿಗೆ ನಾನು ಚಿರರೃಣಿ ಎಂದ ಮಾಜಿ ಸಚಿವರು
ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಕುಮಾರ್ ಬಂಗಾರಪ್ಪ, ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಜೊತೆಗೆ ಸಹಕಾರ ನೀಡಿದ್ದೀರಿ. ನಿಮ್ಮ ವಿಶ್ವಾಸ, ಪ್ರೀತಿ ನನ್ನ ಮೇಲೆ ಇರುವುದನ್ನು ನೋಡಿ ನನಗೆ ತುಂಬ ಖುಷಿಯಾಗಿದೆ. ನಿಮ್ಮ ಅಭಿಮಾನಕ್ಕೆ ನಾನು ಸದಾಕಾಲವೂ ಚಿರ ಋಣಿಯಾಗಿರುತ್ತೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು.
ಪಟ್ಟಣದ ರಂಗನಾಥ ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ಬಸ್ ನಿಲ್ದಾಣದವರೆಗೂ ರೋಡ್ ಆರ್ಕೇಸ್ಟ್ರಾ ನೆರೆದಿದ್ದವರಿಗೆ ಮನರಂಜನೆ ನೀಡಿತು.
ಈ ವೇಳೆ ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಮಹಿಳಾ ಅಧ್ಯಕ್ಷೆ ಕುಸುಮಾ ಪಾಟೀಲ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಮುಖಂಡರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕೆ.ಜಿ.ಬಸವರಾಜ್ ಕೊಡಕಣಿ, ವಕೀಲ ಕೃಷ್ಣಮೂರ್ತಿ, ಹಿರಿಯರಾದ ಪ್ರಭಾಕರ್ ರಾಯ್ಕರ್,ಟಿ.ಆರ್.ಸುರೇಶ್ , ಬರಗಿ ನಿಂಗಪ್ಪ, ಅರುಣ್ ಕುಗ್ವೆ, ಶರತ್, ಗುರುಮೂರ್ತಿ ಹಿರೇಶಕುನ, ಕೃಷ್ಣಮೂರ್ತಿ ಕೊಡಕಣಿ, ಟೇಕಪ್ಪ, ಮೋಹನ್, ಅಣ್ಣಪ್ಪ, ಸುರೇಶ್, ಯೂಸಫ್ ಸಾಬ್, ಕನಕದಾಸ ಕಲ್ಲಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ