ಶಿವಮೊಗ್ಗ : ನವರಾತ್ರಿ ಸಂದರ್ಭದಲ್ಲಿ ನೃತ್ಯ ಸಂಗೀತ ಸೇವೆ ದೇವಿಗೆ ಅತ್ಯಂತ ಪ್ರಿಯವಾದದ್ದು. ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಧಾರ್ಮಿಕ ಸೇವೆ ಜೊತೆ ಸಾಂಸ್ಕೃತಿಕ ಸೇವೆ ನಡೆಸಿ ಕಲಾವಿದರಿಗೆ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ನವರಾತ್ರಿ ಅಂಗವಾಗಿ ಐದು ದಿನಗಳ ಕಾಲ ಏರ್ಪಡಿಸಿದ್ದ ಕಲೋಪಾಸನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ರೆ, ಉತ್ಸವಗಳು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತದೆ. ನಾಡಿನ ಬೇರೆ ಬೇರೆ ಭಾಗದಿಂದ ಕಲಾವಿದರು ಬಂದು ಸಾಂಸ್ಕೃತಿಕ ಕಲೆ ನೀಡುವ ಮೂಲಕ ಸಂಸ್ಕೃತಿ ವಿನಿಮಯವಾಗುತ್ತದೆ. ಸಾಗರ ಅನೇಕ ಕಲೆಗಳಿಗೆ ಆಶ್ರಯತಾಣವಾಗಿದ್ದು, ಕಲಾವಿದರನ್ನು ಗೌರವಿಸಿಕೊಂಡು ಬಂದಿದೆ ಎಂದು ಹೇಳಿದರು.
ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾವನಾ ಸಂತೋಷ್, ನಗರಸಭೆ ಸದಸ್ಯೆ ಮಧುಮಾಲತಿ, ಲಲಿತಮ್ಮ, ಸುಂದರಸಿಂಗ್, ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸದಸ್ಯ ಲೋಕೇಶಕುಮಾರ್ ಇನ್ನಿತರರು ಹಾಜರಿದ್ದರು.