ಬೆಂಗಳೂರು: ದಸರಾ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಬದಲಿಗೆ ನಾಡಿನಲ್ಲಿರುವ ಎಲ್ಲಾ ಜಾತಿ ಧರ್ಮದವರೂ ಒಗ್ಗಟ್ಟಾಗಿ ಆಚರಿಸುವ ನಾಡಹಬ್ಬ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಶನಿವಾರ ಸಹಕಾರ ನಗರ ಮೈದಾನದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಸಹಸ್ರನಾಮ ಜಪಿಸಿ ಮಾತನಾಡಿದ ಅವರು, “ಒಂಭತ್ತು ದಿನಗಳು ನಡೆಯುವ ದಸರಾ ತುಂಬಾ ವಿಶಿಷ್ಠವಾದ ಹಬ್ಬ. ಒಂಭತ್ತು ದಿನಗಳ ಪೈಕಿ ಒಂದೊಂದು ದಿನವೂ ಕಲೆ, ಸಾಹಿತ್ಯ, ಸಂಗೀತ, ಜಾನಪದ ನೃತ್ಯ ಸೇರಿದಂತೆ ನಾಡಿನ ಎಲ್ಲಾ ಬಗೆಯ ಕಲಾ ಪ್ರಕಾರಗಳನ್ನೂ ಕೊಂಡಾಡಲಾಗುತ್ತದೆ. ಈ ಕಲಾ ಪ್ರಕಾರಗಳಲ್ಲಿ ನಾಡಿನ ಎಲ್ಲಾ ಜಾತಿ-ಧರ್ಮದ ಜನರೂ ಪಾಲ್ಗೊಳ್ಳುತ್ತಾರೆ. ಹೀಗೆ ಸಮಾಜದ ಎಲ್ಲಾ ಬಗೆಯ ಜನರನ್ನೂ ಒಂದೆಡೆ ಸೇರಿಸುವ ಕೀರ್ತಿ ನಾಡಹಬ್ಬ ದಸರಾಕ್ಕೆ ಮಾತ್ರವಿದೆ. ಹೀಗಾಗಿ ಈ ಹಬ್ಬ ಧರ್ಮಾತೀತವಾದದ್ದು” ಎಂದರು.
ದಸರಾ ಹಬ್ಬವನ್ನು ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ನಾವು ದಸರಾ ಎಂದತೆ ಉತ್ತರ ಭಾರತದವರು ನವರಾತ್ರಿ ಎಂದು ಕರೆಯುತ್ತಾರೆ. ಹೆಸರು ಏನೇ ಆದರೂ ದುಷ್ಟ ಶಕ್ತಿಗಳ ವಿರುದ್ಧ ಉತ್ತಮರ ಗೆಲುವು ಎಂಬುದೇ ದಸರಾ ಹಬ್ಬ ನೀಡುವ ಸಂದೇಶ. ಏಳು ಶತಮಾನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ದಸರಾವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತಿತ್ತು. ತದನಂತರ ಈ ಹಬ್ಬ ಪರಂಪರಾಗತವಾಗಿ ಮೈಸೂರಿನಲ್ಲಿ ಆಚರಿಸಲಾಗುತ್ತಿದೆ. ಸತತ 9 ದಿನಗಳ ಕಾಲ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಧರ್ಮ ಮತ್ತು ಸಂಸ್ಕೃತಿ ಎರಡನ್ನೂ ಮಿಳಿತಗೊಳಿಸಿ ಇಡೀ ಸಮಾಜ ಒಂದು ಗೂಡಿ ಆಚರಿಸುವುದೇ ನಮ್ಮ ನಾಡಿನ ದಸರಾ ಹಬ್ಬದ ವಿಶೇಷ” ಎಂದು ಹರ್ಷ ವ್ಯಕ್ತಪಡಿಸಿದರು.
“ನಗರ ಭಾಗಗಳಲ್ಲಿ ಹಬ್ಬ ಎಂದರೆ ಮನೆಯಲ್ಲಿ ಹೆಂಗಸರು ದೇವರ ಪೂಜೆ ಮಾಡುವುದು, ಗಂಡಸರು ಟೀವಿ ನೋಡುವುದು ವಿಶಿಷ್ಟ ಊಟ ಮಾಡುವುದರೊಂದಿಗೆ ಹಬ್ಬ ಮುಗಿದು ಹೋಗುತ್ತದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಹೀಗೆ ಆಗಬಾರದು. ಸಾರ್ವಜನಿಕರೆಲ್ಲರೂ ಒಗ್ಗಟ್ಟಾಗಿ ಒಂದೆಡೆ ಸೇರಿ ಸಾಮೂಹಿಕವಾಗಿ ಹಬ್ಬ ಆಚರಿಸಬೇಕು ಎಂಬದೇ ನಮ್ಮ ಉದ್ದೇಶ. ಅದಕ್ಕಾಗಿಯೇ ನಮ್ಮ ಕ್ಷೆತ್ರದಲ್ಲಿ ಸಂಕ್ರಾಂತಿ, ಯುಗಾದಿ, ಓಣಂ, ದಸರಾ ಸೇರಿದಂತೆ ಎಲ್ಲಾ ಹಬ್ಬವನ್ನೂ ಆಯೋಜಿಸಲಾಗುತ್ತದೆ. ಹಬ್ಬವೆಂದರೆ ಗ್ರಾಮೀಣ ಭಾಗಗಳಂತೆ ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಜೊತೆಗೆ ಆಚರಿಸಬೇಕು” ಎಂದು ತಿಳಿಸಿದರು.
ಇಂದು ದಸರಾ ಪ್ರಯುಕ್ತ ದೇವರ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ನಮ್ಮ ಕ್ಷೇತ್ರದ ಯುವಕರು ಮಹಿಳೆಯರು ಹಾಗೂ ಯಕ್ಷಗಾನ ತಂಡಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ರಸಸಂಜೆ ಸಂಗೀತ ಕಾರ್ಯಕ್ರಮ ಇರಲಿದೆ. ಅಲ್ಲದೆ, ದಸರಾ ಹಬ್ಬವೆಂದರೆ ಗೊಂಬೆಗಳ ಪ್ರದರ್ಶನ. ಆದರೆ, ನಮ್ಮ ಜನ ಈಗ ಈ ಹಳೆ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಹೀಗಾಗಿ ಭಾನುವಾರ ಬೆಳಗ್ಗೆಯಿಂದಲೇ ಗೊಂಬೆಗಳ ಪ್ರದರ್ಶನ ಇಟ್ಟವರ ಮನೆಗೆ ತೆರಳಿ ಉಡುಗೊರೆ ನೀಡಲಾಗುವುದು. ಈ ಮೂಲಕ ನಮ್ಮ ಸಂಪ್ರದಾಯ ಮುಂದಿನ ಪೀಳಿಗೆಗೂ ಉಳಿಯಲು ಪ್ರೇರೇಪಿಸಲಾಗುವುದು ಎಂದರು.