ಈಗಾಗಲೇ ಆರಂಭಗೊಂಡಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರು, ಸೂಪರ್ ವೈಸರ್ ಗಳು ಹಾಗೂ ಬಿಇಒಗಳು ಕಡ್ಡಾಯವಾಗಿ ಭಾಗವಹಿಸಿ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂಗ್ರ ಪ್ರಸಾದ್.ಕೆ ಅವರು ಹೇಳಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡೀಯೋ ಸಭಾಂಗಣದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ಪ್ರಗತಿಯ ಸಭೆ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ಜರುಗಿದ್ದು, ನೆರೆ-ಹೊರೆಯ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆಯು ಸಮೀಕ್ಷಾ ಕಾರ್ಯದಲ್ಲಿ ಹಿಂದುಳಿದಿದೆ. ಹಾಗಾಗಿ ಸಮೀಕ್ಷಾ ಕಾರ್ಯಕ್ಕೆ ಕಾಲಾವಕಾಶ ಕಡಿಮೆ ಇದ್ದು, ಎಲ್ಲಾ ಸಮೀಕ್ಷಾದಾರರು ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಸಮೀಕ್ಷೆಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯ-ಕ್ಷಮತೆ ತೋರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ನೇಮಿಸಿದ ಬಹಳಷ್ಟು ಗಣತಿದಾರರು(ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು) ಕ್ಷೇತ್ರಮಟ್ಟದಲ್ಲಿ ಹೋಗಿ ಮೊಬೈಲ್ ಮೂಲಕ ಲಾಗಿನ್ ಆಗದೇ ಇರುವುದು, ಸಮೀಕ್ಷೆಗೆ ತೆರಳದೇ ಇರುವುದು ಕಂಡುಬAದಿದ್ದು, ಈ ಕೂಡಲೇ ಅವರನ್ನು ಸಂಪರ್ಕಿಸಿ, ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಅಂತಹವರ ಮೇಲೆ ಕ್ರಮ ಜರುಗಿಸಬೇಕು ಎಂದು ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ಸೂಚಿಸಿದರು.
ಗ್ರಾಮ ಸಹಾಯಕರಿಂದ ವಿಶೇಷ ಸಹಾಯ:
ಸಮೀಕ್ಷಾ ಕಾರ್ಯದಲ್ಲಿ ಮನೆ ಗುರುತಿಗೆ ಸಂಬಂಧಿಸಿದಂತೆ, ಹಳ್ಳಿಯಿಂದ ಹಳ್ಳಿಗೆ ಸಂಚಾರಕ್ಕೆ ಸಮಸ್ಯೆಯಾದಲ್ಲಿ, ಊಟ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಗೆ ಆಯಾ ಗ್ರಾಮಗಳ ಗ್ರಾಮ ಸಹಾಯಕರು ಸಹಾಯ ಮಾಡಲಿದ್ದಾರೆ ಎಂದರು.
ತಾಂತ್ರಿಕ ದೋಷ ಕಂಡುಬಂದಲ್ಲಿ ತಿಳಿಸಿ:
ಸಮೀಕ್ಷಾ ಕಾರ್ಯಕ್ಕೆ ತೆರಳುವ ಗಣತಿದಾರರು ಮೊಬೈಲ್ ಲಾಗಿನ್ ಆಗುವ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡುಬಂದಲ್ಲಿ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಜೆ ಇಲ್ಲ:
ಹಿಂದುಳಿದ ವರ್ಗಗಳ ಸಮೀಕ್ಷಾ ಕಾರ್ಯ ಮುಗಿಯುವವರೆಗೆ ಸಮೀಕ್ಷಾದಾರರಿಗೆ ಹಬ್ಬ, ಶಾಲಾ ರಜೆ ಸೇರಿದಂತೆ ಯಾವುದೇ ರೀತಿಯ ರಜೆ ಇಲ್ಲ. ಪ್ರತಿಯೊಬ್ಬರೂ ತಪ್ಪದೇ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಪಂ ಮಟ್ಟದಲ್ಲಿ ಶಿಬಿರ:
ಹಳ್ಳಿಗಳಲ್ಲಿ ಲಾಗಿನ್ ಗೆ ನೆಟ್ ವರ್ಕ್ ಸಮಸ್ಯೆ ಕಂಡುಬರುವ ಹಳ್ಳಿಗಳನ್ನು ಗುರುತಿಸಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಿಬಿರ ಆಯೋಜಿಸಲಾಗುತ್ತದೆ. ಇದಕ್ಕೆ ಬೇಕಾದ ಸಿಬ್ಬಂದಿ, ಸಾಮಾಗ್ರಿಗಳನ್ನು ಒದಗಿಸಿಕೊಡಲಾಗುವುದು. ಕುಟುಂಬಸ್ಥರು ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ನೋಂದಾಯಿಸಿಕೊಳ್ಳಲು ಅನುಕೂಲವಾಗಲಿದೆ. ಶಿಬಿರ ಆಯೋಜನೆ ಮಾಹಿತಿಯನ್ನು ಆಯಾ ಗ್ರಾಮಸ್ಥರಿಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.
ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಟೌನ್ ಶಿಪ್, ವಡ್ಡು, ಶಂಕರ ಗುಡ್ಡ ಕಾಲೋನಿಗಳಲ್ಲಿ ಸಮೀಕ್ಷಾದಾರರಿಗೆ ಪ್ರವೇಶ ನೀಡದಿರುವುದರ ಕುರಿತು ಕಂಪನಿಯ ಮುಖ್ಯಸ್ಥರಿಗೆ ಆದೇಶ ರವಾನಿಸಿ ಎಂದು ಸಂಡೂರು ತಹಶೀಲ್ದಾರರಿಗೆ ಸೂಚಿಸಿದರು.
ಪ್ರತಿದಿನ ಬಿಇಒ ಗಳು ಸೂಪರ್ ವೈಸರ್ ಗಳ ಮೇಲ್ವಿಚಾರಣೆ ನಡೆಸಬೇಕು. ಪ್ರತಿಯೊಬ್ಬರ ಸಹಕಾರ-ಸಹಭಾಗಿತ್ವದಿಂದ ಜಿಲ್ಲೆಯನ್ನು ಟಾಪ್-05 ಜಿಲ್ಲೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಿಸುವ ಮೂಲಕ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಎಂಎಫ್ ವಿಶೇಷ ಅಧಿಕಾರಿ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವರ್ಚುವಲ್ ಮೂಲಕ ಎಲ್ಲಾ ತಾಲ್ಲೂಕು ತಹಶೀಲ್ದಾರರು, ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸಿಡಿಪಿಒ ಹಾಗೂ ಇನ್ನೀತರರು ಹಾಜರಿದ್ದರು.