ಶಿವಮೊಗ್ಗ: ಸಾಗರ ತಾಲ್ಲೂಕಿನಲ್ಲಿ ರಸ್ತೆಗಳು ಹಾಳಾಗಿವೆ. ಸಾಗರ ಪಟ್ಟಣ ಸೇರಿದಂತೆ ವಿವಿಧೆಡೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಸಾಗರ ತಾಲ್ಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿಂಬೆಹಣ್ಣಿನ ಸರ್ಕಲ್ ನಲ್ಲಿ ಸಾಗರ ನಗರ, ಗ್ರಾಮಾಂತರ ಮಂಡಲದ ಬಿಜೆಪಿಯಿಂದ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಸಾಗರ ತಾಲ್ಲೂಕಿನ ಬಿಜೆಪಿ ಮುಖಂಡರು ನಿಂಬೆಹಣ್ಣಿನ ಸರ್ಕಲ್ ನಲ್ಲೇ ಧರಣಿ ಕುಳಿತು ಪ್ರತಿಭಟನೆ ನಡೆಸುವ ಮೂಲಕ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದಂತ ಸಾಗರ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷ ದೇವೇಂದ್ರಪ್ಪ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾರಂಟಿ ಭಾಗ್ಯಗಗಳ ನಡುವೆ ಅಭಿವೃದ್ಧಿ ಭಾಗ್ಯ ಕುಂಠಿತವಾಗಿದೆ. ಬೆಲೆ ಏರಿಕೆಯ ಬರೆ ಜನಸಾಮಾನ್ಯರಿಗೆ ಬಿದ್ದಿದೆ. ಗ್ಯಾರಂಟಿಯನ್ನೂ ಕೊಡಿ, ಜೊತೆ ಜೊತೆಗೆ ಅಭಿವೃದ್ಧಿಗೂ ಒತ್ತು ನೀಡಿ. ರಸ್ತೆ ಗುಂಡಿಗಳನ್ನು ಈ ಕೂಡಲೇ ಮುಚ್ಚುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜನರ ಮೂಗಿಗೆ ಗ್ಯಾರಂಟಿ ಹೆಸರಿನಲ್ಲಿ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಪಂಪ್ ಸ್ಟೋರೇಜ್ ಒಪ್ಪಿಗೆಯ ಹಿಂದೆ ನಿಮಗೆ ಲಾಭವಿದೆ. ಹೀಗಾಗಿ ಮಾಡೋದಕ್ಕೆ ಹೊರಟಿದ್ದೀರಿ. ಆದರೇ ಅದರಿಂದ ಅರಣ್ಯ ನಾಶವಾಗಲಿದೆ. ನಿಮ್ಮ ಲಾಭಕ್ಕಾಗಿ ಕೆಲಸ ಮಾಡಬೇಡಿ. ಜನರ ಒಳಿತಾಗುವಂತ ಕೆಲಸಗಳನ್ನು ಮಾಡುವಂತೆ ಆಗ್ರಹಿಸಿದರು.
ಸಾಗರ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಗಣೇಶ್ ಪ್ರಸಾಕ್ ಕೆ.ಆರ್ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಚರ್ಚೆಯೇ ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಯಾವತ್ತು ತೊಲಗುತ್ತೋ ಅಂತ ಜನರು ಕಾಯುತ್ತಿದ್ದಾರೆ. ಅಂದು ಈ ರಾಜ್ಯದ ಜನರ ಅಭಿವೃದ್ಧಿಯಾಗಲಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2.5 ವರ್ಷವಾಗುತ್ತಿದೆ. ಸಾಗರ ನಗರಸಭೆಗೆ ಈವರೆಗೂ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ದಿನೇ ದಿನೇ ಕಂದಾಯ ಸೇರಿದಂತೆ ವಿವಿಧ ತೆರಿಗೆಗಳನ್ನು ಜಾಸ್ತಿ ಮಾಡುತ್ತಿದ್ದಾರೆ. ಇದರಿಂದ ಜನರು ಬೆಲೆ ಏರಿಕೆಯ ಬರೆಯನ್ನು ಅನುಭವಿಸುತ್ತಿದ್ದರು. ಆದರೇ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ಟಿ ದರ ಕಡಿತ ಮಾಡಿ, ಜನರಿಗೆ ರಿಲೀಫ್ ನೀಡಿದ್ದಾರೆ ಎಂದು ಹೇಳಿದರು.
ಸಾಗರ ಟು ಸೊರಬ ರಸ್ತೆಯಾಗಲೀ, ಸಾಗರ ಟು ಜೋಗ, ಸಿಂಗದೂರು ಯಾವುದೇ ರಸ್ತೆ ನೋಡಿ ಗುಂಡಿಗಳದ್ದೇ ಕಾರುಬಾರಾಗಿದೆ. ವಾಹನ ಸವಾರರು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವುದಕ್ಕೆ ಕಷ್ಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಕೂಡಲೇ ಮಾಡುವಂತೆ ಒತ್ತಾಯಿಸಿದರು.
ನಗರಸಭೆ ಸದಸ್ಯ ಟಿ.ಡಿ ಮೇಘರಾಜ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಜನಪರವಾದಂತ ಒಂದೇ ಒಂದು ಕೆಲಸವನ್ನು ಮಾಡುತ್ತಿಲ್ಲ. ಪಂಪ್ ಸ್ಟೋರೇಜ್ ನಲ್ಲಿ ಕಿಕ್ ಬ್ಯಾಕ್ ಪಡೆದಿದೆ ಎಂಬುದಾಗಿ ಆರೋಪಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ಜನಗಣತಿ ಮಾಡುವುದಾಗಿ ಘೋಷಿಸಿದೆ. ಇತ್ತ ಕಾಂಗ್ರೆಸ್ ಸರ್ಕಾರ ಜಾತಿಗಣತಿಯನ್ನು 450 ಕೋಟಿ ವೆಚ್ಚದಲ್ಲಿ ಮಾಡುತ್ತಿದೆ. ಇದರ ಅಗತ್ಯವಿರಲಿಲ್ಲ. ಹಣವನ್ನು ಪೋಲು ಮಾಡುವುದಕ್ಕೆ ಜಾತಿಗಣತಿಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂಬುದಾಗಿ ಕಿಡಿಕಾರಿದರು.
ಬೆಂಗಳೂರಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿರುವ ಕಾರಣಕ್ಕೆ ಐಟಿ, ಬಿಟಿ ಕಂಪನಿಗಳು ಹೊರ ರಾಜ್ಯಗಳಿಗೆ ಹೋಗುವಂತಾಗಿವೆ. ಬೆಂಗಳೂರನ್ನು ಐಟಿ ಕಂಪನಿಗಳು ಬಿಟ್ಟು ಹೋಗದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ತಡೆಯುವ ಕೆಲಸ ಮಾಡಬೇಕು. ಅದಕ್ಕಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ರಸ್ತೆ ಮಧ್ಯೆ ನಿಂತು ರಾಜ್ಯ ಸರ್ಕಾರದ ವಿರುದ್ಧ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ, ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಸದಸ್ಯೆ ಮಧುರ ಶಿವಾನಂದ್, ರಮೇಶ ಹಾರೆಗೊಪ್ಪ, ಪ್ರೇಮಾ ಸಿಂಗ್, ಅಶೋಕ್ ಹೂಬಾ, ಮಂಜಯ್ಯ ಜೈನ್, ಕೃಷ್ಣ ಶೇಟ್, ವಿನೋದ್ ರಾಜ್, ಸತೀಶ್ ಕೆ ಮೊಗವೀರ, ಸಂತೋಷ್, ಗಿರೀಶ್ ಗೌಡ, ರವೀಂದ್ರ ಬಿ.ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ನವರಾತ್ರಿಯ ಪ್ರತಿ ದಿನವನ್ನು ಯಾವ ಪ್ರಾಣಿಗಳು ಪ್ರತಿನಿಧಿಸುತ್ತವೆ? ಇಲ್ಲಿದೆ ಮಾಹಿತಿ | Navratri
BREAKING: ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ ಇನ್ನಿಲ್ಲ | SL Bhyrappa is no more