ಬೆಂಗಳೂರು : ರಾಜ್ಯಾದ್ಯಂತ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಪರ್ಯಾಯ ರೀತಿಯಲ್ಲಿ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದಸರಾ ರಜೆ ಅವಧಿಯಲ್ಲೇ ಸಮೀಕ್ಷಾ ಕಾರ್ಯ ಕೈಗೊಳ್ಳುವುದು ಅನಿವಾರ್ಯ. ಶಾಲಾ ಅವಧಿಯ ದಿನಗಳಲ್ಲಿ ಅವರನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಲು ಆಗುವುದಿಲ್ಲ. ಶಿಕ್ಷಕರನ್ನು ಬಿಟ್ಟು ಬೇರೆಯವರಿಂದಲೂ ಸಮೀಕ್ಷೆನಡೆಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ಶಿಕ್ಷಕ ಅ.7ರವರೆಗೆ ಸಮೀಕ್ಷೆ ನಡೆಸುತ್ತಾರೆ. ಅವರಿಗೆ ಸರ್ಕಾರ ವಿಶೇಷ ಸಂಭಾವನೆ ನೀಡಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಬೇರೆ ದಿನಗಳಲ್ಲಿ ಪರ್ಯಾಯ ವಾಗಿ ಕೊಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಹೇಳಿದ್ದಾರೆ.