ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆ ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನವಾಗಿದೆ. ಇದು ಜನವಿರೋಧಿ ಸಮೀಕ್ಷೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಎಲ್ಲ ಜಾತಿಗಳ ಜನರು ಮತಾಂತರವನ್ನು ವಿರೋಧಿಸಿದ್ದಾರೆ. ಕುರುಬ, ಬ್ರಾಹ್ಮಣ, ವಿಶ್ವಕರ್ಮ ಹೀಗೆ ಎಲ್ಲ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬ ಹೆಸರು ತರಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ರೈಸ್ತರಾಗಿದ್ದು, ಅವರನ್ನು ಮೆಚ್ಚಿಸಲು ಈ ರೀತಿ ಮಾಡಲಾಗಿದೆ. ಯಾರಾದರೂ ಪಾಕಿಸ್ತಾನದವನು, ಸಂವಿಧಾನ ನಂಬಲ್ಲ ಎಂದು ಹೇಳಿದರೆ, ಅದನ್ನು ಹಾಗೆಯೇ ಬರೆದುಕೊಳ್ಳುತ್ತಾರೆಯೇ? ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಾಗಿದ್ದರೆ, ಅದರಲ್ಲಿ ಜಾತಿಗಳ ಹೆಸರನ್ನು ಏಕೆ ಉಲ್ಲೇಖಿಸುತ್ತಾರೆ? ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ಮಾರ್ಗದರ್ಶನದಲ್ಲಿ ಹಿಂದೂಗಳನ್ನು ಒಡೆಯುತ್ತಿದ್ದಾರೆ ಎಂದರು.
ಇದನ್ನು ವಿರೋಧ ಮಾಡುತ್ತಿರುವ ಸಚಿವರು ರಾಜೀನಾಮೆ ಕೊಟ್ಟು ಬರಲಿ. ಕೇವಲ ಹೇಳಿಕೆ ಕೊಟ್ಟು ನಾಟಕವಾಡುವುದು ಬೇಡ. ಹೀಗೆ ಮಾಡಿದರೆ ಜಾತಿ ಸಮುದಾಯದವರು ಸಚಿವರನ್ನು ಕ್ಷಮಿಸುವುದಿಲ್ಲ. ಮತಾಂತರವನ್ನು ತಡೆಯುವುದು ಸರ್ಕಾರದ ಕೆಲಸ. ಆದರೆ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಾಯೋಜಿತವಾಗಿ ಈ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಸಮುದಾಯಕ್ಕೆ ಸೇರಿಸುತ್ತಿದ್ದಾರೆ. ನೂರು ಸಿದ್ದರಾಮಯ್ಯ ಬಂದರೂ ಹಿಂದೂ ಧರ್ಮವನ್ನು ಮಲಿನ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ ಈಗಾಗಲೇ ಜನಗಣತಿ ಹಾಗೂ ಜಾತಿ ಗಣತಿಗೆ ಸಿದ್ಧತೆ ನಡೆಸಿದೆ. ಇದು ಅಧಿಕೃತವಾಗಿದೆ. ರಾಜ್ಯ ಸರ್ಕಾರ ನಡೆಸುವ ಸಮೀಕ್ಷೆಗಳು ಅಧಿಕೃತವಲ್ಲ. ಇದನ್ನು ಮುಂದೆ ಬರುವ ಸರ್ಕಾರ ತಿರಸ್ಕರಿಸಬಹುದು. ಜನರು ಏನು ಹೇಳಿದರೂ ಬರೆಯಬಹುದು ಎಂದರೆ ಸರ್ಕಾರ ಇರುವುದು ಏಕೆ? ಇದು ಸಂವಿಧಾನಕ್ಕೆ ಅಪಚಾರವಾಗಿದೆ. ಇದು ಯಾವುದೇ ಜಾತಿಗಳಿಗೆ ನ್ಯಾಯ ಸಿಗುವ ಸಮೀಕ್ಷೆಯಲ್ಲ. ಲಿಂಗಾಯತ ಜಾತಿಯನ್ನು ಒಡೆಯಲು ಯತ್ನಿಸಿದವರು ಈಗ ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಪ್ರಯೋಗ ಶಾಲೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರಯೋಗಶಾಲೆ ಮಾಡಲಾಗಿದೆ. ಈ ಪ್ರಯೋಗದಲ್ಲಿ ಹಿಂದೂ ಧರ್ಮವನ್ನು ಕುಗ್ಗಿಸುವ ಕೆಲಸ ಮಾಡಲಾಗಿದೆ. ದಸರಾದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ, ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಹೀಗೆ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಹಿಂದೆ ಮಾಡಿದ ಸಮೀಕ್ಷೆಯಲ್ಲಿ 150 ಕೋಟಿ ರೂ. ನುಂಗಲಾಗಿದೆ. ಈಗ ಮತ್ತೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ದೂರಿದರು.
ಚುನಾವಣಾ ಆಯೋಗವನ್ನು ಅವಹೇಳನ ಮಾಡುವುದು, ಹಿಂದೂ ಧರ್ಮಕ್ಕೆ ಅಪಮಾನ ಮಾಡುವುದು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದು ಮೊದಲಾದ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ. ಸಾಹಿತಿ ಭಾನು ಮುಷ್ತಾಕ್ ಅವರಿಗೆ ಯಾವ ಅರ್ಹತೆ ಇದೆಯೆಂದು ಚಾಮುಂಡೇಶ್ವರಿ ಪೂಜೆಗೆ ಕರೆಸಿದ್ದಾರೆ ಎಂದು ತಿಳಿದಿಲ್ಲ ಎಂದರು.
ಬೆಂಗಳೂರಿನಲ್ಲಿ ರಸ್ತೆಗಳು ಹಾಳಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಎಲ್ಲ ರಸ್ತೆಗಳನ್ನೂ ಡಾಂಬರೀಕರಣ ಮಾಡಬೇಕಿದೆ. ಗುಂಡಿ ಮುಚ್ಚಿ ಎನ್ನುವ ಬದಲು ಇಡೀ ರಸ್ತೆಯನ್ನು ದುರಸ್ತಿ ಮಾಡಬೇಕಿದೆ. 25 ಕೋಟಿ ರೂ. ಕೊಟ್ಟಿದ್ದೇನೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದು ಬಿಬಿಎಂಪಿಗೆ ಬಂದು ಟೆಂಡರ್ ಆಗುವ ವೇಳೆಗೆ ಇನ್ನೂ ಒಂದು ವರ್ಷ ಆಗಲಿದೆ. ಆಗ ಮತ್ತೆ ಮಳೆ ಬಂದು ಗುಂಡಿ ಹೆಚ್ಚಲಿದೆ. ಜನರ ಕಣ್ಣು ಒರೆಸಲು ಈ ರೀತಿ ಹೇಳಿಕೆ ನೀಡುವುದು ಬೇಡ. ಇಡೀ ನಗರದಲ್ಲಿ ಸುಮಾರು 5 ಲಕ್ಷ ಗುಂಡಿಗಳಿವೆ. ಡಾಂಬರು ಹಾಕಿದ ಒಂದೇ ಗಂಟೆಯಲ್ಲಿ ಕಿತ್ತುಹೋಗುತ್ತದೆ. ಗುಂಡಿ ಮುಚ್ಚುವ ಬದಲು ರಸ್ತೆಯನ್ನು ಡಾಂಬರೀಕರಣ ಮಾಡುವುದು ಸೂಕ್ತ ಎಂದರು.
BREAKING: ಹೀಗಿದೆ ಇಂದಿನ ಪ್ರಧಾನಿ ಮೋದಿ ಭಾಷಣದ ಪ್ರಮುಖ ಹೈಲೈಟ್ಸ್ | PM Modi
ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ