ಶಿವಮೊಗ್ಗ: ಇಂದು ಸೊರಬ ತಾಲ್ಲೂಕಿನ ಉಳವಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದಂತ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಈ ರಕ್ತದಾದನಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ರಕ್ತದಾನ ಮಾಡಿ ಗಮನ ಸೆಳೆದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವಂತ ಹಳ್ಳಿ ಸಂತೆಯಲ್ಲಿ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿ ಆಶ್ರಯದಲ್ಲಿ ದೂಗೂರು, ಉಳವಿ ಗ್ರಾಮಪಂಚಾಯ್ತಿ ಹಾಗೂ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪ್ರವಾದಿ ಮೊಹಮ್ಮದ್ ಅವರ 1500 ವರ್ಷದ ಜನ್ಮ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಬೃಹತ್ ರಕ್ತದಾನ ಶಿಬಿರವನ್ನು ಸೊರಬ ತಹಶೀಲ್ದಾರ್ ಮಂಜುಳಾ ಬಿ ಹೆಗಡಾಳ ಅವರು ಉದ್ಘಾಟಿಸಿದರು.
ಈ ಬಳಿಕ ಮಾತನಾಡಿದಂತ ಅವರು, ರಕ್ತದಾನ ಮಹಾದಾನವಾಗಿದೆ. ಒಮ್ಮೆಯಾದರೂ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಹೀಗೆ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಿದಂತೆ ಆಗಲಿದೆ. ಆ ನಿಟ್ಟಿನಲ್ಲಿ ಇಂದು ಉಳವಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ, ಯಶಸ್ವಿಯಾಗಿ ನಡೆಸುತ್ತಿರುವುದು ನಿಜಕ್ಕೂ ಉತ್ತಮ ಕೆಲಸವಾಗಿದೆ ಎಂದರು.
ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೃಥ್ವಿ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ದಿನ 12 ಸಾವಿರಕ್ಕೂ ಹೆಚ್ಚು ಜನ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 500 ಜನ, 1 ನಿಮಿಷಕ್ಕೆ 8 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಒಬ್ಬ ವ್ಯಕ್ತಿಯು ರಕ್ತ ದಾನ ಮಾಡುವುದರಿಂದ 3-4 ಜನರ ಜೀವವನ್ನು ರಕ್ಷಿಸಬಹುದು. ಎಲ್ಲರೂ ರಕ್ತದಾನವನ್ನು ಮಾಡಿ ಜೀವವನ್ನು ಉಳಿಸಿ ಎಂಬುದಾಗಿ ಮನವಿ ಮಾಡಿದರು.
ದೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಳವಿ ಫಲಾಹುಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಫಯಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚರಣೆಗಳನ್ನು ಮಾಡುವುದರಿಂದ ಇನ್ನೊಬ್ಬರಿಗೆ ಹಾಗೂ ಸಮಾಜಕ್ಕೆ ಅಡ್ಡಿಯುಂಟು ಮಾಡಬಾರದು. ಇನ್ನೊಬ್ಬರಿಗೆ ಸಹಕಾರ ನೀಡುವಂತೆ ಇರಬೇಕು. ಈ ದೃಷ್ಟಿಯಿಂದ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ರಕ್ತದಾನ ಶಿಬಿರ ಮಾಡುವುದರ ಮೂಲಕ, ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜಾತಿ, ಜನಾಂಗ, ಧರ್ಮದವರು ಸಹಕಾರ ನೀಡಿದ್ದಾರೆ ಎಂದರು.
ಈ ವೇಳೆ ಸೊರಬ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಪವಾರ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಮಳಲಗದ್ದೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಭೈರಪ್ಪ ಮೈಸಾವಿ, ನಿರ್ದೇಶಕ ಭಾಸ್ಕರ್, ಮಂಜಪ್ಪ ಪತ್ರೆಸಾಲು, ಜಿ.ಟಿ.ಗಣಪತಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ್, ದೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಗೌರಮ್ಮ ಗಣಪತಿ, ಚಂದ್ರಕಲಾ, ಉಳವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತನ್ವೀರ್ ಅಹ್ಮದ್, ಸದಸ್ಯ ಪ್ರಶಾಂತ್ ಕೈಸೋಡಿ, ಕಮಿಟಿ ಉಪಾಧ್ಯಕ್ಷ ಹಬ್ಬುಸಾಲೆ, ಕಾರ್ಯದರ್ಶಿ ಖಲಿಮುಲ್ಲ, ಖಜಾಂಚಿ ನೂರ್ ಅಹ್ಮದ್, ಅಲ್ತಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನ ನಡೆಯಿತು. ಎಲ್ಲರೂ ಮಾದಕ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸುವಂತೆ ಪ್ರಮಾಣ ಸ್ವೀಕರಿಸಿದರು. ಇಂದಿನ ಬೃಹತ್ ರಕ್ತದಾನ ಶಿಬಿರದಲ್ಲಿ ಹಿಂದೂ-ಮುಸ್ಲೀಂ ಎನ್ನದೇ ಸುಮಾರು 100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಕುರುಬರಿಗೆ ST ಮೀಸಲಾತಿ ಕುರಿತು ಹೇಳಿಕೆ ಕೇಸ್: ಛಲವಾದಿ ನಾರಾಯಣಸ್ವಾಮಿಗೆ ಜಾಮೀನು ಮಂಜೂರು
ಮೈಸೂರು ದಸರಾ ಪ್ರಯುಕ್ತ 2,300ಕ್ಕೂ ಹೆಚ್ಚು KSRTCಯಿಂದ ವಿಶೇಷ ಬಸ್ ಸಂಚಾರದ ವ್ಯವಸ್ಥೆ