ಬೆಂಗಳೂರು: ರಾಜ್ಯಾಧ್ಯಂತ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ ಅತಿಥಿ ಶಿಕ್ಷಕರ ವೇತನವನ್ನು ಹೆಚ್ಚಿಸುವಂತೆ ಶಾಸಕ ಕೆ.ಗೋಪಾಲಯ್ಯ ಆಗ್ರಹಸಿದ್ದಾರೆ.
ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ 12 ವರ್ಷಗಳಿಂದಲು ಬೆಂಗಳೂರು ಉತ್ತರ ವಲಯದ ಶಿಕ್ಷಕರ ಜೊತೆ ಶಿಕ್ಷಕರ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಸಮಾಜದಲ್ಲಿ ಏನಾದರೂ ಬದಲಾವಣೆ ತರುವ ಶಕ್ತಿಯಿದ್ದರೆ, ಅದು ಶಿಕ್ಷಕ ವರ್ಗಕ್ಕೆ ಇದೆ ಎಂದು ಶಾಸಕ ಕೆ.ಗೋಪಾಲಯ್ಯರವರು ನಾಗಪುರ ವಾರ್ಡ್ ನಲ್ಲಿರುವ ಬಿ.ಜಿ.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಉತ್ತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕೇಂದ್ರ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಶಿಕ್ಷಣ ತಜ್ಞ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಡಾ||ಎಸ್.ರಾಧಾಕೃಷ್ಣನ್ ಹಾಗೂ ಪರಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಮಹತ್ವವನ್ನು ಹೊಂದಿರುವ ವೃತ್ತಿ ಎಂದರು.
ನಂತರ ಗೋಪಾಲಯ್ಯನವರು, ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಶಾಸಕನಾಗಿ ನನ್ನ ಕರ್ತವ್ಯ. ಎಲ್ಲರಿಗೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಶಕ್ತಿಯಿರುವುದಿಲ್ಲ. ಹಾಗಾಗಿ ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಸರ್ಕಾರಿ ಶಾಲೆಗಳ ಮಕ್ಕಳು ಮಾತ್ರವಲ್ಲದೆ ನನ್ನ ಕ್ಷೇತ್ರದ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಕೂಡ ಉತ್ತಮ ಅಂಕಗಳನ್ನು ತೆಗೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ 8,9 ಮತ್ತು 10ನೇ ತರಗತಿಯ ಸುಮಾರು 9,000 ವಿದ್ಯಾರ್ಥಿಗಳಿಗೆ “ಪರೀಕ್ಷಾ ಮಿತ್ರ” ಪುಸ್ತಕಗಳನ್ನು ಕೊಡುವ ಕೆಲಸ ಮಾಡಿರುತ್ತೇನೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶಿರ್ವಾದದೊಂದಿಗೆ, ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನನ್ನ ಕ್ಷೇತ್ರದಲ್ಲಿ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 1,60,000 ಮಕ್ಕಳು ಈ ಸಂಸ್ಥೆಯಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಮಕ್ಕಳನ್ನು ಎಲ್.ಕೆ.ಜಿ.ಗೆ ಸೇರಿಸಿದರೆ, ಪಿಯುಸಿ, ಡಿಗ್ರಿ ಪಿ.ಹೆಚ್.ಡಿ. ಮುಗಿಸಿ ಹೊರಹೋಗುವಷ್ಟು ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಇಡೀ ರಾಜ್ಯಕ್ಕೆ ನನ್ನ ಕ್ಷೇತ್ರವು ಶಿಕ್ಷಣ ರಂಗದಲ್ಲಿ ಮೊದಲ ಸ್ಥಾನ ಗಳಿಸಬೇಕು ಎನ್ನುವುದು ನನ್ನ ಆಶಯವಾಗಿದೆ. ಅದು ಈಡೇರಬೇಕಾದರೆ, ಶಿಕ್ಷಕರ ಜೀವನವು ಚೆನ್ನಾಗಿರಬೇಕು ಮತ್ತು ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ಅದಕ್ಕಾಗಿಯೇ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೆ ಫುಡ್ ಕಿಟ್ ಹಾಗೂ ಔಷಧಿ ಕಿಟ್ ಗಳನ್ನು ನಮ್ಮ ಸಂಸ್ಥೆಯಿಂದ ನೀಡಿದ್ದೇನೆ. ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಓದಗಿಸಿದ್ದೇನೆ ಎಂದು ಕೊರೋನಾ ಸಂಕಷ್ಟವನ್ನು ನೆನಪು ಮಾಡಿಕೊಂಡರು.
ವಿಧಾನಸಭೆ ಅಧಿವೇಶನದಲ್ಲಿ ಅತಿಥಿ ಶಿಕ್ಷಕರುಗಳಿಗೆ ಕೊಡುತ್ತಿರುವ 12,000 ರೂಪಾಯಿ ಸಾಲುವುದಿಲ್ಲ ಕನಿಷ್ಠ 18,000 ಪ್ರತಿ ತಿಂಗಳಿಗೆ ವೇತನ ನೀಡಬೇಕು ಎಂದು ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದೇನೆ. ಶಿಕ್ಷಕರ ಕೊರತೆ ಎಷ್ಟಿದೆಯೆಂದರೆ ನಾನೇ ನನ್ನ ಟ್ರಸ್ಟ್ ವತಿಯಿಂದ 46 ಶಿಕ್ಷಕರಿಗೆ ವೇತನ ನೀಡುತ್ತಿದ್ದೇನೆ. ಕೂಡಲೇ ಸರ್ಕಾರವು ಶಿಕ್ಷಕರನ್ನು ನೇಮಿಸದಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರು ಸಿಗುವುದಿಲ್ಲ ಎನ್ನುವ ಮೂಲಕ ಶಾಸಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಉಗ್ಗಲಿ, ಉತ್ತರ ಜಿಲ್ಲೆ ಬಿಜೆಪಿ ಅಧ್ಯಕ್ಷ ಎಸ್. ಹರೀಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ಎನ್ ಜಯರಾಮ್, ಬಿಬಿಎಂಪಿ ಮಾಜಿ ಸದಸ್ಯ ಕೆ. ವಿ. ರಾಜೇಂದ್ರ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಡಿಡಿಪಿಐ ಅಂಜನಪ್ಪ, ಶಿಕ್ಷಣಾಧಿಕಾರಿ ತಾರಾನಾಥ್ ಬಿಜೆಪಿ ಮುಖಂಡರುಗಳಾದ ಎನ್.ವೆಂಕಟೇಶ್, ಶಿವಾನಂದ ಮೂರ್ತಿ, ವೆಂಕಟೇಶ್ ಮೂರ್ತಿ,ಪದ್ಮಾವತಿ ಶ್ರೀನಿವಾಸ್, ಮಹಿಳಾ ಮುಖಂಡರಾದ ನಾಗರತ್ನ ಲೋಕೇಶ್, ಯಶೋಧ ನಾರಾಯಣ, ಅವಿನ್ ಆರಾಧ್ಯ ಉಮಾಪತಿ ನಾಯ್ಡು ಸೇರಿದಂತೆ ಹಲವು ಗಣ್ಯರು ಹಾಗೂ ಉಪಾಧ್ಯಾಯ ವೃಂದದವರು ಭಾಗವಹಿಸಿದ್ದರು.