ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ 29 ವರ್ಷದ ವ್ಯಕ್ತಿಯನ್ನು ಅಮೆರಿಕದ ರೂಮ್ ಮೇಟ್ ಜತೆ ಜಗಳದ ನಂತರ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.
ಕ್ಯಾಲಿಫೋರ್ನಿಯಾದ ಸಾಫ್ಟ್ ವೇರ್ ವೃತ್ತಿಪರ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆತನ ತಂದೆ ಮೊಹಮ್ಮದ್ ಹಸ್ನುದ್ದೀನ್ ಪಿಟಿಐಗೆ ತಿಳಿಸಿದ್ದು, ಮಗನ ಸ್ನೇಹಿತನ ಮೂಲಕ ಸಾವಿನ ಸುದ್ದಿ ತಿಳಿದುಬಂದಿದೆ. ನಿಖರವಾದ ಸಂದರ್ಭಗಳು ಅಸ್ಪಷ್ಟವಾಗಿವೆ ಎಂದಿದ್ದಾರೆ.
ಹಸ್ನುದ್ದೀನ್ ಪ್ರಕಾರ, ರೂಮ್ ಮೇಟ್ ನೊಂದಿಗಿನ ಘರ್ಷಣೆಯು ಸಣ್ಣ ವಿಷಯದ ಮೇಲೆ ನಡೆಯಿತು. ಗುರುವಾರ ಬೆಳಿಗ್ಗೆ ಮಾತ್ರ ಗುಂಡಿನ ದಾಳಿಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದರು.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ, ಹಸ್ನುದ್ದೀನ್ ಅವರು ತಮ್ಮ ಮಗನ ಶವವನ್ನು ಮೆಹಬೂಬ್ ನಗರಕ್ಕೆ ತರಲು ಸಹಾಯ ಮಾಡುವಂತೆ ಕೋರಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ಅಧಿಕಾರಿಗಳ ತುರ್ತು ಸಹಾಯವನ್ನು ಕೋರಿ, “ಪೊಲೀಸರು ಅವರನ್ನು ಗುಂಡಿಕ್ಕಿ ಕೊಂದ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ” ಎಂದು ಬರೆದಿದ್ದಾರೆ.
ಮಜ್ಲಿಸ್ ಬಚಾವೊ ತಹ್ರೀಕ್ (ಎಂಬಿಟಿ) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಕುಟುಂಬದ ಮನವಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು ಮತ್ತು ಸರ್ಕಾರವನ್ನು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು.
ನಿಜಾಮುದ್ದೀನ್ ಅಮೆರಿಕದಲ್ಲಿ ಎಂಎಸ್ ಪದವಿ ಪಡೆದಿದ್ದ ನಂತರ ಅಲ್ಲಿ ಸಾಫ್ಟ್ ವೇರ್ ವೃತ್ತಿಪರರಾಗಿ ಕೆಲಸ ಮಾಡಿದ್ದರು ಎಂದು ಅವರ ತಂದೆ ತಿಳಿಸಿದ್ದಾರೆ.
ಅಮೆರಿಕ ಪೊಲೀಸರು ಏನು ಹೇಳಿದರು
ಸಾಂಟಾ ಕ್ಲಾರಾ ಪೊಲೀಸರ ಪ್ರಕಾರ, ಐಸೆನ್ ಹೋವರ್ ಡ್ರೈವ್ ನಲ್ಲಿರುವ ನಿವಾಸದೊಳಗೆ ತನ್ನ ರೂಮ್ ಮೇಟ್ ಗೆ ಚಾಕುವಿನಿಂದ ಇರಿದ ನಂತರ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸೆಪ್ಟೆಂಬರ್3ರಂದು ಬೆಳಿಗ್ಗೆ 6:18 ರ ಸುಮಾರಿಗೆ ಅವರು ಪ್ರತಿಕ್ರಿಯಿಸಿದರು ಮತ್ತು ಚಾಕುವಿನಿಂದ ಶಸ್ತ್ರಸಜ್ಜಿತವಾದ ಶಂಕಿತನನ್ನು ಎದುರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








