ಮಂಡ್ಯ : ಕರಾವಳಿಯ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡಾಮಂಡಲರಾದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿರುವ ಗಲಭೆ ಹಾಗೂ ಶಾಂತಿ ಭಂಗ ಮಾಡಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಜನತೆಗೆ ಅಭಯ ನೀಡಿದರು.
ಮಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಾನು ವಿದೇಶಕ್ಕೆ ಹೋಗಿದ್ದೆ. ಯಾವುದೇ ಮೋಜು ಮಸ್ತಿ ಮಾಡಲು ನಾನು ಹೋಗಿರಲಿಲ್ಲ. ಆ ಸಂಧರ್ಭದಲ್ಲಿ ಮದ್ದೂರು ಪಟ್ಟಣದಲ್ಲಿ ಹಿಂದೆಂದೂ ಸಹ ನಡೆಯಬಾರದಂತ ಒಂದು ಘಟನೆ ನಡೆದಿದೆ. ಈ ಘಟನೆ ನಡೆದ ಕ್ಷಣದಿಂದಲೂ ಪೊಲೀಸರ ಸಂಪರ್ಕದಲ್ಲಿದ್ದೆ. ಕ್ಷಣ ಕ್ಷಣಕ್ಕೂ ಮಾಹಿತಿ ಪಡೆದು ಸೂಚನೆ ನೀಡಿದ್ದೆ. ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ತೀವ್ರ ಕಾರ್ಯಾಚರಣೆ ನಡೆಸಿದ ಪರಿಣಾಮ ಪರಿಸ್ಥಿತಿಯನ್ನು ಹತೋಟಿ ತಂದು ಶೀಘ್ರವಾಗಿ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ ಎಂದರು.
ಕಲ್ಲು ಹೊಡೆದು ಶಾಂತಿ ಭಂಗ ಮಾಡಿರುವ ಕಿಡಿಗೇಡಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ಇಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಈ ವಿಚಾರದಲ್ಲಿ ಯಾವುದೇ ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಉದಯ್ ತಿಳಿಸಿದರು.
ಕರಾವಳಿಯ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕೆಲವರು ಮಲೆನಾಡು, ಶಿವಮೊಗ್ಗದಿಂದ ಬಂದು ಇಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗ್ತಿದೆ. ತೊಡೆ ಮುರಿತಿವಿ, ತಲೆ ಕಡಿತೀವಿ ಅನ್ನೋದಕ್ಕೆ ಇದೇನು ತಾಲಿಬಾನ್ ದೇಶನಾ. ಇಂತಹ ಹೇಳಿಕೆಗಳಿಂದ ಜಿಲ್ಲೆಯಲ್ಲಿ ಶಾಂತಿ ಭಂಗ ಉಂಟು ಮಾಡುವ ಕೆಲಸವಾಗುತ್ತಿದೆ. ನಮ್ಮ ಜನ ಶಾಂತಿ ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಈ ಘಟನೆಯನ್ನು ಬಳಸಿಕೊಂಡು ಕೆಲವರು ಅಪಪ್ರಚಾರ ಮಾಡಿದ್ದಾರೆ ನಾನು ಕ್ಷೇತ್ರದಲ್ಲಿ 4 ವರ್ಷದಿಂದ ಜನರ ಸೇವೆ ಮಾಡ್ತಾ ಬಂದಿದ್ದಿನಿ. ಅಲ್ಲದೆ ಈ ಘಟನೆಯನ್ನೆ ಬಿಂಬಿಸಿಕೊಂಡು ಕೆಲವರು ಬೆಂಕಿ ಹಚ್ಚುವ ಕೆಲಸ ಮಾಡ್ತಿರೋದು ಯಾರಿಗೂ ಒಳ್ಳೆಯದಲ್ಲ. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿರೋದು ನಿಜಕ್ಕೂ ಖಂಡನಾರ್ಹವಾಗಿದೆ ಎಂದರು.
ಕ್ಷೇತ್ರದಲ್ಲಿ 90 ರಷ್ಟು ಮಂದಿ ಹಿಂದೂಗಳೆ ಇದ್ದೀವಿ. ಇಲ್ಲಿನ ಜನರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಇದು ಮಂಡ್ಯ ಜಿಲ್ಲೆ. ಮಲೆನಾಡು, ಶಿವಮೊಗ್ಗದಿಂದ ಬಂದವರು ನಮಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ.
ಯಡಿಯೂರಪ್ಪ ಸಿಎಂ ಆಗಲು ಯಾರು ಕಾರಣ ಎಂದು ವಿಜಯೇಂದ್ರ ಮೊದಲು ತಿಳಿದುಕೊಳ್ಳಲಿ. ಸಿಎಂ ಆಗಿದ್ದ ವೇಳೆ ಫೋಕ್ಸ್ , ಲಂಚದ ಹಣವನ್ನು ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಂಡು ಜೈಲಿಗೆ ಹೋದವರು ಯಾರು ? ಅಂತಹ ಮಗನಿಂದ ನಮ್ಮ ಕ್ಷೇತ್ರದ ಜನತೆ ಭಾಷಣ ಕೇಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಜನತೆ ಶಕ್ತಿಯುತರಾಗಿದ್ದೇವೆ. ಇಂತಹ ಕಚಡ ಕೆಲಸಗಳು ಮುಂದೆ ನಡೆಯದ ಹಾಗೆ ಎಚ್ಚರವಹಿಸುತ್ತೇವೆ. ಶಾಂತಿಯ ನೆಲದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಇದು ನಿಜಕ್ಕೂ ಒಳ್ಳೇಯ ಬೆಳವಣಿಗೆ ಅಲ್ಲ. ಮೊದಲು ನಿಮ್ಮ ಮನೆಯ ತೂತು ಮುಚ್ಚಿಕೊಳ್ಳುವ ಕೆಲಸ ಮಾಡಿಕೊಳ್ಳಿ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಜೆಡಿಎಸ್, ಬಿಜೆಪಿ ಮೈತ್ರಿ ಆದಾಗಿನಿಂದ ಇಂತಹ ಘಟನೆಗಳೂ ನಡೆಯಲು ಪ್ರಾರಂಭವಾಗಿವೆ. ಜಿಲ್ಲೆಯಲ್ಲಿ ಕೆರಗೋಡು, ನಾಗಮಂಗಲ ಹಾಗೂ ಮದ್ದೂರು ಘಟನೆಗಳು ನಡೆದಿವೆ. ಜೆಡಿಎಸ್ ಪಕ್ಷವನ್ನು ದುರ್ಬಳಕೆ ಮಾಡಿಕೊಂಡು ಬಡವರ ಮಕ್ಕಳನ್ನು ಪ್ರಚೋದಿಸಿ ಗುಂಪು ಗರ್ಷಣೆಯಲ್ಲಿ ತೊಡಗಿಸಿ ಅಮಾಯಕರನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಅಭಿವೃದ್ಧಿಗೆ ಕೇವಲ 2 ವರ್ಷದಲ್ಲಿ 1500 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರೈತರು, ಜನರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಧಾರ್ಮೀಕ ಹಾಗೂ ದೇವಾಲಯಗಳ ಅಭಿವೃದ್ಧಿ ಟ್ರಸ್ಟ್ ಮತ್ತು ಶಾಸಕರ ಅನುದಾನ ನೀಡಲಾಗ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು. ಅವರು ಮಾಡಿರುವ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿ.ಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ: ಶಾಸಕ ಕೆ.ಎಂ.ಉದಯ್
KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಓದಿದ ಪ್ರೌಢಶಾಲೆಗೆ 40ರ ಸಂಭ್ರಮ: ಸೆ.19ರಂದು ಗುರುವಂದನಾ ಕಾರ್ಯಕ್ರಮ ನಿಗದಿ