ಹಾಸನ: ಕುಗ್ರಾಮವಾದ ತಗಡೂರಿನಲ್ಲಿ ಪ್ರೌಢಶಾಲೆ ಪ್ರಾರಂಭವಾಗಿ 40 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಅಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸೇರಿ, ಇದೇ ಸೆ.19ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಓದಿದಂತ ಶಾಲೆ ಕೂಡ ಆಗಿದೆ.
ಶಾಲೆಯಲ್ಲಿ ಪಾಠ ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಭದ್ರ ಅಡಿಪಾಯ ಹಾಕಿದ ಸುಮಾರು 30 ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಹಳೆ ವಿದ್ಯಾರ್ಥಿಗಳ ವೇದಿಕೆ ಸಂಘಟಿತವಾದ ಪ್ರಯತ್ನ ಮಾಡಿದೆ. ನಾನೂ ಈ ಶಾಲೆಯ ಹಳೆಯ ವಿದ್ಯಾರ್ಥಿ ಎನ್ನುವುದು ಹೆಮ್ಮೆ ಮತ್ತು ಹೆಗ್ಗಳಿಕೆ.
ಇಂದು
ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ನಾ ಮುಂದು, ತಾ ಮುಂದು ಎಂದು ನಿತ್ಯವೂ ಒಂದೇ ಊರಿಗೆ ಆರೇಳು ಬಸ್‌ಗಳು ಬರುತ್ತವೆ.
ಅಂದು
ಪ್ರೌಢಶಾಲೆ ವಿದ್ಯಾಭ್ಯಾಸ ಪಡೆಯಲು ಆರೇಳು ಕಿ.ಮೀ. ದೂರದಲ್ಲಿರುವ ನುಗ್ಗೇಹಳ್ಳಿ, ಬಾಗೂರು ಅಥವಾ ಚಿಕ್ಕೋನಹಳ್ಳಿ ಗೇಟ್‌ಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇಷ್ಟು ದೂರ ಹೋಗುವುದಕ್ಕೆ ಬಸ್ ವ್ಯವಸ್ಥೆ ಇರಲಿ, ಸೈಕಲ್ ವ್ಯವಸ್ಥೆ ಕೂಡ ಎಷ್ಟೋ ಕುಟುಂಬಗಳಿಗೆ ಇರಲಿಲ್ಲ.
ಆರೇಳು ಕಿ.ಮೀ. ದೂರ ನಿತ್ಯ ನಡದೇ ಹೋಗಿ ಬರಬೇಕಾದ ಅನಿವಾರ್ಯತೆ ಇತ್ತು. ಈ ಕಾರಣಕ್ಕಾಗಿಯೇ ಎಷ್ಟೋ ಮಕ್ಕಳು ಪ್ರೌಢಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದರು. 7ನೇ ತರಗತಿ ತನಕ ಓದುತ್ತಿದ್ದ ಹೆಣ್ಣುಮಕ್ಕಳಿಗೂ ಪ್ರೌಢಶಿಕ್ಷಣ ದೂರದ ಮಾತಾಗಿಯೇ ಉಳಿದಿತ್ತು.
ಆ ಹೊತ್ತಿನಲ್ಲಿ ತಗಡೂರು ಗ್ರಾಮಕ್ಕೊಂದು ಪ್ರೌಢಶಾಲೆ (ಹೈಸ್ಕೂಲ್) ತರಬೇಕು ಎನ್ನುವ ತವಕ ಹಿರಿಯ ಗ್ರಾಮಸ್ಥರಲ್ಲಿ ಶುರುವಾಯಿತು. ಆ ಸಂದರ್ಭದಲ್ಲಿ ಕಲ್ಲೇಸೋಮನಹಳ್ಳಿ ಛೇರ್ಮನ್ ನಿಂಗೇಗೌಡರು ಮುಂಚೂಣಿ ನಾಯಕತ್ವ ವಹಿಸಿದರು. ಅವರ ಜೊತೆಯಲ್ಲಿ ಹಿಂದಲ ಮನೆ ಶಿವಣ್ಣ, ಪುರುದೇಗೌಡರು, ಪಟೇಲ್ ಕೆಂಪೇಗೌಡರು, ಚನ್ನಬಸವೇಗೌಡರು, ಲಕ್ಕರಸನಹಳ್ಳಿ ಪಟೇಲರು ಮತ್ತು ಗೌಡರುಗಳು, ಪದ್ಯಾವರಹಳ್ಳಿ (ರಂಗಾಪುರ) ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅದಕ್ಕೆ ಬೆಂಬಲವಾಗಿ ನಿಂತರು. ಆಗ ಹಿರಿಸಾವೆ ಅಣ್ಣಯ್ಯ(ಶ್ರೀಕಂಠಯ್ಯ) ರಾಜಕೀಯ ಪರ್ವ ಕಾಲ. ಅಂತೂ ಸತತ ಹೋರಾಟದ ಪರಿಣಾಮವಾಗಿ ತಗಡೂರಿಗೆ ಹೈಸ್ಕೂಲ್ ಮಂಜೂರಾಯಿತು.
ಹೊಸ ಸ್ಕೂಲ್ ಪ್ರಾರಂಭಿಸಲು ಕಟ್ಟಡವೇ ಇರಲಿಲ್ಲ. ಆಗ ತಗಡೂರಿನಲ್ಲಿದ್ದ ಶ್ರೀ ಬಸವೇಶ್ವರ ಯುವಕ ರೈತ ಸಂಘದ ಮನೆಯಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಯಿತು.
ತರಗತಿಗಳನ್ನು ನಡೆಸಲು ಪಟೇಲರ ಮನೆ ಕೊಟ್ಟಿಗೆ ಮನೆಗಳನ್ನು ಬಿಡಿಸಿಕೊಳ್ಳಲಾಗಿತ್ತು. ಆ ಕೊಟ್ಟಿಗೆಯಲ್ಲಿಯೇ ಪಾಠ. ಬಿಲ್ಡಿಂಗ್ ಆಗುವ ತನಕ ಮೊದಲ ಎರಡು ಬ್ಯಾಚ್‌ಗಳಿಗೆ ಈ ಸಂಕಷ್ಟದ ಸ್ಥಿತಿಯೇ ಅನಿವಾರ್ಯವಾಗಿತ್ತು. ಈ ನಡುವೆ ಪೈಪೋಟಿಯಲ್ಲಿ ಓಬಳಾಪುರಕ್ಕೂ ಹೈಸ್ಕೂಲ್ ಮಂಜೂರಾಗಿದ್ದು ಬೇರೆ ಮಾತು.
ಸ್ಕೂಲ್ ಬಿಲ್ಡಿಂಗ್ ಎಲ್ಲಿ ಮಾಡಬೇಕು ಎನ್ನುವ ಪ್ರಶ್ನೆ ಬಂತು. ಲಕ್ಕರಸನಹಳ್ಳಿ, ರಂಗಾಪುರ, ಕಾಮನಾಯ್ಕನಹಳ್ಳಿ, ಕಲ್ಲೇಸೋಮನಹಳ್ಳಿ, ಓಬಳಾಪುರ, ಹೆಗ್ಗಡಿಗೆರೆ, ಭೂವನಹಳ್ಳಿ, ವಡ್ಡರಹಟ್ಟಿ, ಸಿದ್ದರಹಟ್ಟಿಗೆ ತಗಡೂರು ಬಾರೆ ಕೇಂದ್ರವಾಗುತ್ತದೆ ಎನ್ನುವ ಕಾರಣದಿಂದ ಅಲ್ಲಿಯೇ ಶಾಲೆ ಪ್ರಾರಂಭಿಸಲು ತೀರ್ಮಾನಿಸಿದ್ದರಿಂದ ಬಾರೆಯಲ್ಲಿದ್ದ ಜಮೀನನ್ನು ಇಂಜಿನೀಯರ್ ಚನ್ನವೀರಪ್ಪ, ರುದ್ರಪ್ಪ ಅವರುಗಳು ದಾನವಾಗಿ ನೀಡಿದರು.
ಆ ಕಾರಣದಿಂದ ಬಾರೆಯಲ್ಲಿ ಪ್ರೌಢಶಾಲೆಯ ಕಟ್ಟಡ ಉದ್ಘಾಟನೆಗೊಂಡಿತು. ಈಗ ಅಲ್ಲಿ ಹಾಸ್ಪಲ್, ಹಾಸ್ಪಿಟಲ್ ಕೂಡ ಆಗಿದೆ. ಅಷ್ಟೇ ಅಲ್ಲ, ಗ್ರಾಮ ಪಂಚಾಯಿತಿ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘವೂ ಈ ಬಾರೆ ಮೇಲೆಯೇ ಇದೆ. ಹಾಗಾಗಿ ಈಗಲೂ ಸುತ್ತಮುತ್ತಲ ಹಳ್ಳಿಗೆ ತಗಡೂರು ಕೇಂದ್ರವಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನಲವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಗಣ್ಯಾತಿ ಗಣ್ಯರು, ಸುತ್ತ ಮುತ್ತಲ ಗ್ರಾಮಸ್ಥರು, ಶಾಲೆಯಲ್ಲಿ ಓದಿ ನಾನಾ ವೃತ್ತಿ ಅವಲಂಭಿಸಿ ಬದುಕು ರೂಪಿಸಿಕೊಂಡಿರುವ ಹಳೇ ವಿದ್ಯಾರ್ಥಿಗಳ ಸಮೂಹ ಅಲ್ಲಿ ಸೇರುತ್ತಿದೆ. ಅದೊಂದು ದಿನ ಸಂಭ್ರಮ, ಸಡಗರ, ಹಳೆ ನೆನಪುಗಳ ಪಯಣ.
ವಿದ್ಯಾರ್ಥಿ ಸಂಘದ ಚುನಾವಣೆಗೆ ಬಿರುಸಾಗಿ ಓಡಾಡಿ, ಬಡಿದಾಡಿಕೊಂಡಿದ್ದು, ಗಣಪತಿ ಇಡಬೇಕು ಎಂದು ಹಠ ಹಿಡಿದು ಸಂಭ್ರಮಾಚರಣೆ ಮಾಡಿದ್ದು, ಸ್ಕೂಲ್ ಗೆ ಚಕ್ಕರ್ ಹೊಡೆದು ಪೆಟ್ಟು ತಿಂದಿದ್ದು, ತಪ್ಪು ಮಾಡಿ ಸಿಕ್ಕಿಬಿದ್ದಾಗ ಮೇಸ್ಟ್ರ ಬೈಗುಳಕ್ಕೆ ಗುರಿಯಾಗಿದ್ದು, ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದ ಸಡಗರ, ಪ್ರಿಪ್ರೇಟರಿ ಎಕ್ಸಾಂ, ಪಬ್ಲಿಕ್ ಎಕ್ಸಾಂ ಟೆನ್ಷನ್, ಶಾಲಾ ವಾರ್ಷಿಕೋತ್ಸವದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿ ನಾಟಕವಾಡಿದ್ದು, ಎಸ್ಎಸ್ಎಲ್ಸಿ ಬೀಳ್ಕೊಡುಗೆ ಸಮಾರಂಭ…. ಹೀಗೆ ಹತ್ತಾರು ನೆನಪುಗಳು ಅಲ್ಲಿ ಬೆಸೆದುಕೊಂಡಿವೆ.
ತಗಡೂರು ಪ್ರೌಢಶಾಲೆ ಸಂಭ್ರಮದಲ್ಲಿ ದಶಕಗಳ ಬಳಿಕ ಬಹಳಷ್ಟು ಜನರು ಮುಖಾಮುಖಿಯಾಗುತ್ತಿದ್ದೇವೆ. ಬಿಡುವಾಗಿದ್ದರೆ ನೀವೂ ಬನ್ನಿ. ಬ್ಯುಸಿಯಾಗಿದ್ದರೆ ಅಲ್ಲಿಂದಲೇ ಶುಭವೆನ್ನಿ ಎಂಬುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.