ಬೆಂಗಳೂರು : ಸುಮಾರು 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗ ನಿರ್ಧರಿಸಲಾಗಿದ್ದು, ರಾಜ್ಯದಲ್ಲೂ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯ ಮುಖ್ಯ ಚುನಾವಣಾ ಆಯೋಗ ಇದರ ಪೂರ್ವ ಸಿದ್ದತೆ ಆರಂಭಿಸಿದೆ. ಈ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ 2002ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು.
ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಬಿಎಲ್‌ಒಗಳು ಮೂರು ಬಾರಿ ಭೇಟಿ ನೀಡಲಿದ್ದು, ಪಕ್ಕದ ಮನೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಫೋಟೋ ನೀಡಬೇಕು. ಪ್ರತಿಯೊಬ್ಬ ಮತದಾರರು ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಎಸ್ಐಆರ್ನಲ್ಲಿ ದಾಖಲೆ ನೀಡಿದರೆ, ಮುಂದಿನ ಪರಿಷ್ಕರಣೆಯಲ್ಲಿ ಮತ್ತೆ ದಾಖಲೆ ಕೇಳುವುದಿಲ್ಲ. ಮನೆಯಲ್ಲಿ ಲಭ್ಯವಿಲ್ಲದವರು ಆನ್ಲೈನ್ನಲ್ಲೂ ಅರ್ಜಿ ಹಾಕಬಹುದು.
ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರವೂ ಮತದಾರರ ಹೆಸರಿಲ್ಲದಿದ್ದರೆ ಬಿಎಲ್‌ಒಗಳು ನೀಡಿರುವ ಸಹಿ ಮಾಡಿದ ನಮೂನೆ ಮೂಲಕ ಪ್ರಶ್ನಿಸಬಹುದು. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ನಿನ್ನೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.