ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮಹತ್ವದ ತ್ರಿವಳಿ ತಲಾಖ್ ನಿಷೇಧಗೊಳಿಸಿದ್ದರು. ಆದರೆ ಈ ಒಂದು ತ್ರಿವಳಿ ತಲಾಖ್ ನಿಷೇಧವಿದ್ದರೂ ಇದೀಗ ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್ ಹೇಳಿದ್ದಾನೆ. ಚಂದ್ರಲೇಔಟ್‌ನ ಗಂಗೊಂಡನಹಳ್ಳಿಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ನಡೆದಿದೆ.
ಶಾಬಜ್ ಅಲಿ ಎಂಟು ವರ್ಷದ ಹಿಂದೆ ಯುವತಿಯೊಬ್ಬಳ್ಳನ್ನು ಮದುವೆಯಾಗಿದ್ದ. ಹೆಂಡತಿ ಜೊತೆ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದ. ಮಕ್ಕಳಾಗಿಲ್ಲ ಅಂತ ಆಗಾಗ ಹೆಂಡತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಐದು ಮಾಂಸದ ಅಂಗಡಿಗಳನ್ನು ಇಟ್ಟುಕೊಂಡು ಶಾಬಜ್ ವ್ಯಾಪಾರ ಮಾಡುತ್ತಿದ್ದ. ‘ಅಂಗಡಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಿ ಅಂತ ಹೇಳಿದ್ದಕ್ಕೆ ಕೋಪಗೊಂಡು ದ್ವೇಷ ಬೆಳೆಸಿದ್ದಾನೆ’ ಅಂತ ಮಾವ ಆರೋಪಿಸಿದ್ದಾರೆ. ತ್ರಿವಳಿ ತಲಾಖ್ ನಿಷೇಧ ಬಳಿಕವೂ ನನ್ನ ಮಗಳ ಜೀವನ ಹಾಳಾಯ್ತು. ಕಾನೂನು ಹೋರಾಟ ಮುಂದುವರಿಸ್ತೀವಿ ಅಂತ ಸಂತ್ರಸ್ತೆ ತಂದೆ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ನಿಷೇಧ ಬಳಿಕವೂ ವ್ಯಕ್ತಿ ತನ್ನ ಹೆಂಡತಿಗೆ ಫೋನ್ ಮಾಡಿ ಮೂರು ಬಾರಿ ತಲಾಖ್ ಎಂದು ಉಚ್ಛರಿಸಿ ಕರೆ ಕಟ್ ಮಾಡಿದ್ದಾನೆ. ಇಲ್ಲಿಗೆ ಎಂಟು ವರ್ಷದ ದಾಂಪತ್ಯ ಜೀವನ ಕೇವಲ 10 ಸೆಕೆಂಡ್‌ನಲ್ಲಿ ಮುರಿದು ಬಿದ್ದಿದೆ. ಹೊಸ ಕಾನೂನಿನ ಬಳಿಕವೂ ಬದುಕು ಅಂತ್ಯದ ಬಗ್ಗೆ ಆತಂಕದಿಂದ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ವಿಚ್ಛೇದನ ನೀಡಿದ ಪತಿ ಕಾನೂನು, ಖಾಕಿ ಏನು ಮಾಡಲ್ಲವೆಂದು ಹೆಂಡತಿಗೆ ಅವಾಜ್ ಹಾಕಿದ್ದಾನೆ.
ಮುಸ್ಲಿಂ ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದಿಂದ ಮುಕ್ತಿ ಕಲ್ಪಿಸಲು ತ್ರಿವಳಿ ತಲಾಖ್ ನಿಷೇಧ ಕಾಯಿದೆ ನೆರವಾಗಿದೆ. ಭಾರತದಲ್ಲಿ ತ್ರಿವಳಿ ತಲಾಖ್ (ತ್ವರಿತ ತಲಾಖ್) ನಿಷೇಧವು 2019 ರ ಕಾಯ್ದೆಯಿಂದ ಕಾನೂನುಬದ್ಧವಾಗಿದ್ದು, ತ್ವರಿತ ವಿಚ್ಛೇದನವನ್ನು ಅಪರಾಧ ಎಂದು ಘೋಷಿಸಲಾಗಿದೆ. 2017 ರಲ್ಲಿ ಸುಪ್ರೀಂ ಕೋರ್ಟ್ ತಲಾಖ್‌ನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಇದು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ತ್ವರಿತ ವಿಚ್ಛೇದನದ ಪದ್ಧತಿಯನ್ನು ಕೊನೆಗೊಳಿಸಲು ಕೈಗೊಂಡ ಒಂದು ಕ್ರಮವಾಗಿದೆ.