ಕೊಪ್ಪಳ: ಒಳ ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿವರಾಜ್.ಎಸ್. ತಂಗಡಗಿ ಅವರು ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಚಿವರಾದ ಗೋವಿಂದ್ ಕಾರಜೋಳ ಹಾಗೂ ನಾರಾಯಣ ಸ್ವಾಮಿಯವರಿಗೆ ಒಳ ಮೀಸಲಾತಿ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರು ಎಂದೂ ಕೂಡ ಈ ಸಮುದಾಯಗಳ ಬಗ್ಗೆ ಚಿಂತನೆ ಮಾಡಿದವರಲ್ಲ. ಕಾರಜೋಳ ಹಾಗೂ ನಾರಾಯಣಸ್ವಾಮಿಯವರು ಸಚಿವರಾಗಿದ್ದಾಗ ಏನು ಗೆಣಸು ಕೊರೆಯುತ್ತಿದ್ದಾರಾ? ಈಗ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಛೇಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯವರ ಬಗ್ಗೆ ಯಾವುದೇ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿಲ್ಲ. ನಮ್ಮ ರಾಜ್ಯದ ಬಜೆಟ್ ನ ಒಟ್ಟು ಗಾತ್ರದಲ್ಲಿ ಶೇ.24.1ರಷ್ಟು ಹಣವನ್ನು ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಕೇಂದ್ರ ಸರ್ಕಾರ ಕೂಡ ತಮ್ಮ ಬಜೆಟ್ ನ ಒಟ್ಟು ಗಾತ್ರದಲ್ಲಿ ಶೇಕಡ 24.1 ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಿ ಎಂದು ಸವಾಲೆಸೆದರು.
ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುವ ಇವರಿಂದ ಈ ದೇಶ ಹಾಗೂ ಸಮಾಜ ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಮಾದಿಗ ಹಾಗೂ ಚಲವಾದಿ ಸಮಾಜದ ಬಗ್ಗೆ ಮಾತನಾಡುವ ಹಕ್ಕು ನಮಗಿದೆ. ನಾವು ಆ ಸಮುದಾಯಗಳ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದವರು ಎಂದು ಹೇಳಿದರು.
ಬಿಜೆಪಿಯವರು ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಬಡವರ ಮಕ್ಕಳನ್ನು ಬೀದಿಗೆ ತಳ್ಳಿ ಅವರಿಂದ ಹೋರಾಟ ಮಾಡಿಸುತ್ತಾರೆ. ಬಿಜೆಪಿಗರಿಂದ ರಸ್ತೆಯಲ್ಲಿ ಬಡವರ ಮಕ್ಕಳ ಕೊಲೆಗಳಾಗುತ್ತಿವೆ. ಬಿಜೆಪಿಯವರು ಧರ್ಮದ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ನಿಮ್ಮ ಕಾಲದಲ್ಲಿ ಯಾವ ರೀತಿಯ ಅಭಿವೃದ್ಧಿಯಾಗಿದೆ, ನಮ್ಮ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂಬ ಬಗ್ಗೆ ಚರ್ಚೆ ನಡೆಯಲಿ. ಬಿಜೆಪಿಯವರು ಇಂದು ಯುವ ಸಮುದಾಯಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿರುವ ಸಾಹಿತಿ ಬಾನು ಮುಷ್ತಾಕ್ ಅವರ ಬಗ್ಗೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅವರು ರಚಿಸಿರುವುದು ಕನ್ನಡದ ಕೃತಿ. ಉರ್ದು ಭಾಷೆಯಲ್ಲಿ ಕೃತಿ ರಚನೆ ಮಾಡಿಲ್ಲ. ಅವರಿಗೆ ಬೂಕರ್ ಪ್ರಶಸ್ತಿ ಬಂದಾಗ ರಾಜ್ಯವಲ್ಲ ಇಡೀ ದೇಶವೇ ಸಂಭ್ರಮಾಚರಣೆ ಮಾಡಿತ್ತು. ಆದರೆ ಅವರ ಬಗ್ಗೆಯೇ ಇದೀಗ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಬೇಳೆಗಳು ಬೇಯಿಸಿಕೊಳ್ಳುತ್ತಿದ್ದಾರೆ. ಧರ್ಮದ ಬಗ್ಗೆ ಮಾತನಾಡುತ್ತ ಹೋದರೆ, ನಾವು ಅದೋಗತಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತುಂಗಾಭದ್ರಾ ಡ್ಯಾಮ್ ರಕ್ಷಣೆ ನಮ್ಮ ಆದ್ಯತೆ. ನವೆಂಬರ್ 30ರ ವರೆಗೆ ನೀರನ್ನು ನದಿಗೆ ಹರಿಸಲಾಗುವುದು. ಬಳಿಕ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ. ಒಂದು ಗೇಟ್ ಅಳವಡಿಸಲು ಸುಮಾರು ಐದಾರು ದಿನ ಬೇಕಾಗುತ್ತದೆ. ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎರಡನೇ ಬೆಳೆಗೆ ನೀರು ಸಿಗುವುದಿಲ್ಲವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಜಲ ಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದು, ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಡ್ಯಾಮ್ ನ ರಕ್ಷಣೆ ಹಾಗೂ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಈ ಬಾರಿ ಎರಡನೇ ಬೆಳೆಗೆ ನೀರು ಒದಗಿಸುವುದು ಕಷ್ಟ ಸಾಧ್ಯ ಎಂದು ಸಚಿವ ತಂಗಡಗಿಯವರು ಸ್ಪಷ್ಟನೆ ನೀಡಿದರು.
ದಸರಾ ಉದ್ಘಾಟನೆ, ಜನರ ಭಾವನೆ ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ: ಬೊಮ್ಮಾಯಿ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ