ಶಿವಮೊಗ್ಗ : ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು. ನ್ಯಾಯಾಲಯದ ಮೂಲಕ ಬ್ಯಾಂಕ್‌ಗಳು, ಮೈಕ್ರೋಫೈನಾನ್ಸ್ಗಳು ರೈತರ ಸಾಲ ವಸೂಲಾತಿಗೆ ಹೊಸ ಅಸ್ತ್ರ ಪ್ರಯೋಗಿಸುತ್ತಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ರೈತರ ಆಸ್ತಿ ಹರಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ತಕ್ಷಣ ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಬೆಳೆ ಉತ್ತಮವಾಗಿ ಬಂದರೆ ರೈತ ಸಾಲ ತೀರಿಸಲು ಹೆದರುವುದಿಲ್ಲ. ಆದರೆ ಮಳೆ ಕಣ್ಣುಮುಚ್ಚಾಲೆಯಿಂದ ರೈತ ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾನೆ. ಇಂತಹ ಹೊತ್ತಿನಲ್ಲಿ ರೈತ ಸಾಲ ಹೇಗೆ ತೀರಿಸಲು ಸಾಧ್ಯ ಎನ್ನುವ ಕನಿಷ್ಟ ಪರಿಜ್ಞಾನ ಸರ್ಕಾರಕ್ಕೆ ಇರಬೇಕು. ಮುಖ್ಯಮಂತ್ರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಿ ಸಾಲ ವಸೂಲಿ ಮಾಡುವಂತೆ ಇಲ್ಲ ಎಂದು ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಆದೇಶ ನೀಡಿದ್ದಾರೆ. ಇದೀಗ ನ್ಯಾಯಾಲಯದ ಮೂಲಕ ಸಾಲ ವಸೂಲಾತಿ ನಡೆಸಿ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ತಕ್ಷಣ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
1995ರಲ್ಲಿ ರೈತ ಆತ್ಮಹತ್ಯೆ ಜಾಸ್ತಿಯಾದಾಗ ಅಂದಿನ ಸರ್ಕಾರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಡಾ. ಎಂ.ಎಸ್.ಸ್ವಾಮಿನಾಥನ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ವರದಿ ನೀಡಿ 26 ವರ್ಷ ಕಳೆದಿದ್ದರೂ ಈತನಕ ಅದು ಅನುಷ್ಟಾನಕ್ಕೆ ಬಂದಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೂರನೇ ಅವಧಿ ಇದಾಗಿದೆ. ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದ ಪ್ರಧಾನಿಯವರಿಗೆ ಈತನಕ ರೈತರು ನೆನಪಾಗದೆ ಇರುವುದು ದುರದೃಷ್ಟಕರ ಸಂಗತಿ. ರೈತರ ಆರ್ಥಿಕ ದಿವಾಳಿತನವೇ ಆತ್ಮಹತ್ಯೆಗೆ ಕಾರಣ, ರೈತರ ಆರ್ಥಿಕ ಸಂಕಷ್ಟ ನಿವಾರಿಸಲು ರೈತರ ಉತ್ಪನ್ನಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂಬಿತ್ಯಾದಿ ಸಲಹೆಗಳಿದ್ದರೂ ಅದರ ಪಾಲನೆಯಾಗಿಲ್ಲ. ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಅವೈಜ್ಞಾನಿಕ ಯೋಜನೆಯಾಗಿದ್ದು ಅಪಾರ ಪ್ರಮಾಣದಲ್ಲಿ ಅರಣ್ಯನಾಶವಾಗುತ್ತದೆ. ಈ ಹಿಂದೆ ಹಾಸನದಲ್ಲಿ ಜಿಲ್ಲೆಯಲ್ಲಿ ಇಂತಹದ್ದೆ ಯೋಜನೆಗೆ ಮುಂದಾದಾಗ ರಾಜ್ಯ ರೈತ ಸಂಘ ಇದರ ವಿರುದ್ದ ನ್ಯಾಯಾಲಯಕ್ಕೆ ಹೋಗಿತ್ತು. ಇದರಲ್ಲಿ ರೈತ ಸಂಘ ಯಶಸ್ಸು ಕಂಡಿದ್ದು, ಅಗತ್ಯ ಬಿದ್ದರೆ ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ಆಗುವ ಅನಾಹುತ ಕುರಿತು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಹೇಳಿದರು.
ಈ ಗೋಷ್ಟಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ಪ್ರಮುಖರಾದ ರಾಮಚಂದ್ರ, ಈರಣ್ಣ, ನಾಗರಾಜ್, ವೀರಭದ್ರ, ವೆಂಕಟೇಶ್, ಮೇಘರಾಜ್ ಹಾಜರಿದ್ದರು.
ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ: ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000