ನವದೆಹಲಿ: ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಈಶಾನ್ಯವು ದೀರ್ಘಕಾಲದಿಂದ ತೊಂದರೆ ಅನುಭವಿಸುತ್ತಿತ್ತು, ಆದರೆ ಕಳೆದ 11 ವರ್ಷಗಳಲ್ಲಿ ಈ ಪ್ರದೇಶವು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ದೇಶದ ಬೆಳವಣಿಗೆಯ ಎಂಜಿನ್ ಆಗಿ ರೂಪಾಂತರಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಐಜ್ವಾಲ್ ಬಳಿಯ ಲೆಂಗ್ ಪುಯಿ ವಿಮಾನ ನಿಲ್ದಾಣದಿಂದ ವರ್ಚುವಲ್ ಮೂಲಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಮಂತ್ರಿಯವರು ಮಿಜೋರಾಂನಲ್ಲಿ 9,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ಭಾರತದ ‘ಆಕ್ಟ್ ಈಸ್ಟ್’ ನೀತಿಯಲ್ಲಿ ರಾಜ್ಯದ ಕಾರ್ಯತಂತ್ರದ ಪಾತ್ರವನ್ನು ಎತ್ತಿ ತೋರಿಸಿದರು. ಕಲಾದನ್ ಬಹು ಮಾದರಿ ಸಾರಿಗೆ ಯೋಜನೆ ಮತ್ತು ಹೊಸ ರೈಲು ಮಾರ್ಗಗಳಂತಹ ಉಪಕ್ರಮಗಳು ಆಗ್ನೇಯ ಏಷ್ಯಾದೊಂದಿಗೆ ಮಿಜೋರಾಂನ ಸಂಪರ್ಕವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
ಪ್ರಾರಂಭಿಸಲಾದ ಪ್ರಮುಖ ಯೋಜನೆಗಳಲ್ಲಿ ಬೈರಾಬಿ-ಸೈರಾಂಗ್ ರೈಲು ಮಾರ್ಗವೂ ಸೇರಿದ್ದು, ಇದು ಭೂಪ್ರದೇಶದಿಂದ ಸುತ್ತುವರಿದ ಮಿಜೋರಾಂ ಅನ್ನು ಭಾರತದ ರೈಲ್ವೆ ನಕ್ಷೆಯಲ್ಲಿ ದೃಢವಾಗಿ ಇರಿಸಿದೆ. ಈ ಯೋಜನೆಯು ರಾಜ್ಯದ ರಾಜಧಾನಿ ಐಜ್ವಾಲ್ ಅನ್ನು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವುದರಿಂದ ಇದು ರಾಜ್ಯಕ್ಕೆ ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣಿಸಿದರು








